ಸರ್ವಜ್ಞ, ಶರಣರ ವಚನದಲ್ಲಿ ಚುಟುಕು ಜನಜನಿತ

KLG CUTUKU
Published on

ಕಲಘಟಗಿ: ಮಹತ್ವದ ವಿಚಾರಧಾರೆಗಳನ್ನು ಕಡಿಮೆ ಅವಧಿಯಲ್ಲಿ ಅರ್ಥಪೂರ್ಣವಾಗಿ ತಿಳಿಸುವುದೇ ಚುಟುಕು ಸಾಹಿತ್ಯದ ಉದ್ದೇಶವಾಗಿದೆ ಎಂದು ಮನಗುಂಡಿ ಮಹಾಮನೆಯ ಬಸವಾನಂದ ಸ್ವಾಮೀಜಿ ತಿಳಿಸಿದರು.

ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ತಾಲೂಕು ಘಟಕ, ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ ಪರಸಾಪುರ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ಪ್ರಥಮ ವರ್ಷದ ಚುಟುಕು ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿ, ಆಧ್ಯಾತ್ಮಿಕ, ಸಾಮಾಜಿಕ, ಧಾರ್ವಿುಕ, ಸಾಂಸ್ಕೃತಿಕ, ಶೈಕ್ಷಣಿಕ, ಕೌಟುಂಬಿಕ ಜೀವನದ ನಾನಾ ರಂಗಗಳಲ್ಲಿ ಚುಟುಕು ತನ್ನ ಅಸ್ತಿತ್ವವನ್ನು ತೋರ್ಪಡಿಸುತ್ತದೆ. ಚುಟುಕಿನ ಬೇರುಗಳನ್ನು ಕನ್ನಡದ ಜಾನಪದ ತ್ರಿಪದಿಗಳಲ್ಲಿ, ಸರ್ವಜ್ಞನ ವಚನಗಳಲ್ಲಿ ಹಾಗೂ ಶರಣರ ವಚನಗಳಲ್ಲಿ ಗುರುತಿಸಬಹುದು ಎಂದರು.

ಚುಸಾಪ ರಾಜ್ಯ ಸಂಚಾಲಕ ಕೃಷ್ಣಮೂರ್ತಿ ಮಾತನಾಡಿ, ಚುಟುಕು ಸಾಹಿತ್ಯ ಪರಿಷತ್ ಬದುಕು, ಬರಹದ ಪೂರಕವಾಗಿ ಕಾರ್ಯ ನಿರ್ವಹಿಸುತ್ತಿದೆ. ಬದುಕಿಗೆ ಹತ್ತಿರವಾಗಿರುವ ನೈಜ ಹಾಗೂ ಹಸಿವಿನ ಸಂಕಟವನ್ನು ಚುಸಾಪ ಎತ್ತಿ ತೋರಿಸುತ್ತದೆ. ಮೊಬೈಲ್ ಗೀಳಿನಿಂದಾಗಿ ಎಲ್ಲರೂ ಪುಸ್ತಕ ಓದುವ ಹವ್ಯಾಸ ಕಳೆದುಕೊಳ್ಳುತ್ತಿದ್ದೇವೆ ಎಂದರು.

ಸಮ್ಮೇಳನದ ಸರ್ವಾಧ್ಯಕ್ಷ ಪ್ರಭಾಕರ ನಾಯಕ ಮಾತನಾಡಿ, ಚುಟುಕು ಸಾಹಿತ್ಯಕ್ಕೆ ಸುದೀರ್ಘ ಇತಿಹಾಸವಿದ್ದು, ಶಿಲಾಶಾಸನ ಲಿಪಿಗಳಲ್ಲಿ ಶರಣರ ವಚನಗಳು, ದಾಸರ ತ್ರಿಪದಿಯೇ ಸರ್ವಜ್ಞರ ಚುಟುಕು ಸಾಹಿತ್ಯದ ಗ್ರಂಥ ರಚಿಸಿದ್ದಾರೆ ಎಂದರು.

ಇದಕ್ಕೂ ಮುನ್ನ ಚುಟುಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಪ್ರಭಾಕರ ನಾಯಕ ಅವರನ್ನು ಭವ್ಯ ರಥದ ಮೂಲಕ ಪಟ್ಟಣದ ವಿವಿಧ ಬೀದಿಗಳಲ್ಲಿ ಸಕಲ ವಾದ್ಯಗಳೊಂದಿಗೆ ಮೆರವಣಿಗೆ ನಡೆಸಲಾಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಮುರಳ್ಳಿ, ಸಚಿವರ ಆಪ್ತ ಕಾರ್ಯದರ್ಶಿ ಸೋಮಶೇಖರ ಬೆನ್ನೂರ, ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಶಾಂತಣ್ಣ ಕಡಿವಾಲ, ತಾಲೂಕಾಧ್ಯಕ್ಷ ವೀರಣ್ಣ ಕುಬಸದ, ಪಪಂ ಅಧ್ಯಕ್ಷೆ ಶಿಲ್ಪಾ ಪಾಲ್ಕರ, ಉಪಾಧ್ಯಕ್ಷ ಗಂಗಾಧರ ಗೌಳಿ, ಜಾನಪದ ಕಲಾವಿದರಾದ ಎಂ.ಆರ್. ತೋಟಗಂಟಿ, ರಾಮು ಮೂಲಗಿ, ಬಿಇಒ ಉಮಾದೇವಿ ಬಸಾಪುರ, ವೈ.ಜಿ. ಭಗವತಿ, ಗುರುಲಿಂಗ ಉಣಕಲ, ಸಿ.ಬಿ. ಜಾಬಿನ, ಸೋಮಲಿಂಗ ಒಡೆಯರ, ಶಂಕರಗೌಡ ಬಾವಿಕಟ್ಟಿ, ಪ್ರಭು ರಂಗಾಪುರ, ಸುನೀಲ ಕಮ್ಮಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net