

ಶಿಗ್ಗಾಂವಿ: ಪಟ್ಟಣದ ಪುರಸಭೆ ವಾಣಿಜ್ಯ ಮಳಿಗೆಗಳ ಮರು ಹರಾಜಿಗೆ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ. ಇದರಿಂದ ಪುರಸಭೆಯ ಲಕ್ಷಾಂತರ ರೂಪಾಯಿ ಆದಾಯಕ್ಕೆ ಕತ್ತರಿ ಬಿದ್ದಂತಾಗಿದೆ.
ಶಿಗ್ಗಾಂವಿ ಪಟ್ಟಣದ ಪುರಸಭೆಗೆ ಬಹು ನಿರೀಕ್ಷಿತ ಆದಾಯ ಮೂಲಗಳಾದ ವಾಣಿಜ್ಯ ಮಳಿಗೆಗಳು ಕಳೆದ 15 ವರ್ಷಗಳಿಂದಲೂ ಹರಾಜಾಗಿಲ್ಲ. ಪ್ರಮುಖ ಮಾರುಕಟ್ಟೆಯಲ್ಲಿರುವ ಈ ಮಳಿಗೆಗಳು ಉದ್ಘಾಟನೆಗೊಂಡ ಬಳಿಕ ಹರಾಜಾಗಿರುವುದನ್ನು ಬಿಟ್ಟರೆ, ಮರು ಹರಾಜು ಮಾಡುವ ಗೋಜಿಗೆ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಹೋಗಿಲ್ಲ.
ಪುರಸಭೆಗೆ ಸೇರಿದ 58 ವಾಣಿಜ್ಯ ಮಳಿಗೆಗಳು ಸರ್ಕಾರ ನಿಯಮಾನುಸಾರ ಹರಾಜು ಪ್ರಕ್ರಿಯಗೊಳಪಟ್ಟಿಲ್ಲ. ಕಾಲಕಾಲಕ್ಕೆ ಹರಾಜು ಮಾಡದೇ ಹಳೆಯ ಬಾಡಿಗೆಯನ್ನೇ ಮುಂದುವರಿಸಲಾಗಿದೆ. 15 ವರ್ಷದ ಹಿಂದೆ ಮಳಿಗೆಯ ಅಳತೆಗೆ ಅನುಸಾರ 2500 ರಿಂದ 3000 ರೂ. ಬಾಡಿಗೆ ನಿಗದಿಪಡಿಸಿ ಹರಾಜು ಮಾಡಲಾಗಿತ್ತು. ಸದ್ಯ ಮಾರುಕಟ್ಟೆಯಲ್ಲಿ ಮಳಿಗೆಯೊಂದಕ್ಕೆ ಕನಿಷ್ಠ 5 ರಿಂದ 8 ಸಾವಿರ ರೂ. ಬಾಡಿಗೆ ಇರುತ್ತದೆ. ಆದರೆ, ಹಳೆಯ ಬಾಡಿಗೆಯಿಂದ ಆದಾಯಕ್ಕೆ ಕತ್ತರಿ ಬಿದ್ದಿದೆ.
ಪುರಸಭೆಗೆ ಆದಾಯವಾಗುವ ಮಳಿಗೆಗಳನ್ನು ಹರಾಜು ಹಾಕಬೇಕು. ಹರಾಜು ಪ್ರಕ್ರಿಯೆಗೆ ಪುರಸಭೆ ಅಧ್ಯಕ್ಷರು ದಿನಾಂಕ ನಿಗದಿ ಪಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
ಮಳಿಗೆ ಹರಾಜು ಮಾಡುವ ವಿಷಯ ಪುರಸಭೆಯ ಬಜೆಟ್ ಅಧಿವೇಶನ, ಸಾಮಾನ್ಯ ಸಭೆಯಲ್ಲಿ ಕೆಲವು ಸದಸ್ಯರು ಪ್ರಸ್ತಾಪಿಸಿದರೆ, ಮೆತ್ತೆ ಕೆಲವು ಸದಸ್ಯರು ವಿವಿಧ ಕಾರಣ ಹೇಳಿ ಹರಾಜು ಪ್ರಕ್ರಿಯೆನ್ನು ತಡೆ ಹಿಡಿಯುತ್ತಿದ್ದಾರೆ ಎನ್ನಲಾಗಿದೆ.
ಮಳಿಗೆ ಹರಾಜಿನಲ್ಲಿ ಮೀಸಲಾತಿ ಬಳಕೆಯಾಗಿಲ್ಲ ಎನ್ನಲಾಗುತ್ತಿದೆ. ಕೆಲವರು ಮಳಿಗೆ ಪಡೆದು ಅಕ್ರಮವಾಗಿ ಮತ್ತೊಬ್ಬರಿಗೆ ದುಪ್ಪಟ್ಟು ಬಾಡಿಗೆಗೆ ನೀಡಿ, ಹಣ ಜೇಬಿಗಿಳಿಸುತ್ತಿದ್ದಾರೆ ಎಂದು ಕೆಲವು ವ್ಯಾಪಾರಸ್ಥರು ಆರೋಪಿಸುತ್ತಾರೆ.
ಅವಧಿ ಮುಗಿದರೂ ಹರಾಜು ಮಾಡಲು ಅಧಿಕಾರಿಗಳು ಮುಂದಾಗುತ್ತಿಲ್ಲ. ಪುರಸಭೆ ಅಧಿಕಾರಿಗಳು ಮತ್ತು ಆಡಳಿತ ಮಂಡಳಿಯವರು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ. ಲಕ್ಷಾಂತರ ರೂ. ಆದಾಯ ತಂದುಕೊಡುವ ಈ ಮಳಿಗೆಗಳ ಹರಾಜು ಪ್ರಕ್ರಿಯೆಗೆ ಮೀನಮೇಷ ಎಣಿಸುತ್ತಿದ್ದಾರೆ. ಮಳಿಗೆಗಾಗಿ ಅರ್ಜಿ ಸಲ್ಲಿಸುವವರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಕೂಡಲೆ ಮಳಿಗೆಗಳನ್ನು ಮರು ಹರಾಜು ಪ್ರಕ್ರಿಯೆ ನಡೆಸಿ ಪುರಸಭೆ ಆದಾಯ ಹೆಚ್ಚಿಸಿಕೊಳ್ಳಬೇಕು. ಮಂಜುನಾಥ ಮಣ್ಣನ್ನವರ, ಪುರಸಭೆ ನಾಮ ನಿರ್ದೇಶಿತ ಸದಸ್ಯ. ವಾಣಿಜ್ಯ ಮಳಿಗೆಗಳ ಮರು ಹರಾಜು ಮಾಡುವ ಕೆಲಸ ಪ್ರಗತಿಯಲ್ಲಿದೆ. ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ, ಬಾಡಿಗೆದಾರರಿಗೆ ನೋಟಿಸ್ ಕೊಡಲು ನಿರ್ಧರಿಸಲಾಗಿದೆ. ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆದು ಶೀಘ್ರದಲ್ಲಿಯೇ ಮಳಿಗೆಗಳ ಮರುಹರಾಜು ಪ್ರಕ್ರಿಯೆ ನಡೆಸಲಾಗುವುದು. ಮಲ್ಲೇಶ್ ಆರ್., ಪುರಸಭೆ ಮುಖ್ಯಾಧಿಕಾರಿ ಶಿಗ್ಗಾಂವಿ