ಮನೆ ಮಾಲೀಕನ ಕತ್ತು ಕತ್ತರಿಸಿ ಕೊಂದ !

10 web
ಮಾದನಾಯಕನಹಳ್ಳಿಯಲ್ಲಿ ಗ್ರಾಮಾಂತರ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಬಾಬಾ ಸ್ಥಳ ಪರಿಶೀಲನೆ ನಡೆಸಿದರು. ಡಿವೈಎಸ್​ಪಿ ಜಗದೀಶ್​, ಇನ್​ಸ್ಪೆಕ್ಟರ್​ ಶಶಿಧರ್​ ಇತರರು ಇದ್ದರು.
Published on

ಕಸದ ಕವರ್​ ಎಸೆದು, ಗುಟ್ಖಾ ಉಗಿದಿದ್ದನ್ನು ಪ್ರಶ್ನಿಸಿದ್ದಕ್ಕೆ ಹತ್ಯೆ

ನೆಲಮಂಗಲ: ಕಸ ತುಂಬಿದ ಕವರ್​ ಎಸೆದು, ರಸ್ತೆಯಲ್ಲೇ ಗುಟ್ಖಾ ಉಗಿದವನಿಗೆ ಬುದ್ಧಿ ಹೇಳಿದ ಮನೆ ಮಾಲೀಕನ ಕತ್ತು ಕತ್ತರಿಸಿ ಕೊಲೆ ಮಾಡಲಾಗಿದೆ.
ಮಾದನಾಯಕನಹಳ್ಳಿಯ ಸಿದ್ದಪ್ಪ(70) ಕೊಲೆಯಾದ ವೃದ್ಧ. ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ತುಮಕೂರು ಜಿಲ್ಲೆಯ ಶಿರಾ ನಿವಾಸಿ ಪುನೀತ್​(24)ನನ್ನು ಪೊಲೀಸರು ಕೆಲವೇ ಗಂಟೆಗಳಲ್ಲಿ ಬಂಧಿಸಿದ್ದಾರೆ. ಸಿದ್ದಪ್ಪ ಅವರ ಮನೆಯಲ್ಲಿ ಬಾಡಿಗೆಗಿದ್ದ ಪುನೀತ್​ ಸ್ವಚ್ಛತೆ ವಿಷಯದಲ್ಲಿ ಆಗಾಗ ಸಣ್ಣಪುಟ್ಟ ಗಲಾಟೆ ಮಾಡುತ್ತಿದ್ದ. ಶುಕ್ರವಾರ ಬೆಳಗ್ಗೆ ಪುನೀತ್​ ಕಸ ತುಂಬಿದ ಕವರ್​ ಎಸೆದು, ರಸ್ತೆಯಲ್ಲೇ ಗುಟ್ಖಾ ಉಗಿದು ಹೋಗುತ್ತಿದ್ದ. ಈ ವೇಳೆ ಹಿಂದೆ ಬರುತ್ತಿದ್ದ ಸಿದ್ದಪ್ಪ ಬೈದಿದ್ದಾನೆ. ಈ ವಿಚಾರವಾಗಿ ಕುಪಿತಗೊಂಡ ಯುವಕ, ಮನೆಯಿಂದ ಮಚ್ಚು ತಂದು ವೃದ್ಧನ ಕತ್ತು ಕತ್ತರಿಸಿ ಪರಾರಿಯಾಗಿದ್ದ. ತಕ್ಷಣ ಸ್ಥಳಿಯರು ಮಾದನಾಯಕನಹಳ್ಳಿ ಠಾಣೆಗೆ ಮಾಹಿತಿ ನೀಡಿದರು. ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ಶವಗಾರಕ್ಕೆ ಸಾಗಿಸಿದರು. ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸಿದ್ದಪ್ಪ 10 ವರ್ಷಗಳ ಹಿಂದೆ ನಿವೃತ್ತಿಯಾಗಿದ್ದರು. 15 ಮನೆಗಳನ್ನು ಬಾಡಿಗೆ ನೀಡಿ, ಬರುವ ಹಣದಿಂದ ಜೀವನ ಸಾಗಿಸುತ್ತಿದ್ದರು.

ಸುಳಿವು ನೀಡಿದ ಮೊಬೈಲ್​ ನೆಟ್​ವರ್ಕ್​: ಸಿದ್ದಪ್ಪ ಕೊಲೆಯಾದ ತಕ್ಷಣ ಸ್ಥಳ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರ್ಯಾಚರಣೆಗಿಳಿದರು. ಆರೋಪಿಯ ಮೊಬೈಲ್​ ನೆಟ್​ವರ್ಕ್​ ಸುಳಿವು ಆಧರಿಸಿ ಬೆನ್ನತ್ತಿ ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಬಿದರಕಲ್ಲು ಗ್ರಾಮದ ಸಂಬಂಧಿಕರ ಮನೆಯಲ್ಲಿ ಅಡಗಿದ್ದ ಪುನೀತ್​ನನ್ನು ಬೆಳಗ್ಗೆ 11 ಗಂಟೆಗೆಲ್ಲ ಬಂಧಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net