ಸ್ವಂತ ಮಕ್ಕಳನ್ನೇ ಕೊಂದ ಅಪರಾಧಿಗೆ ಜೀವಾವಧಿ ಶಿಕ್ಷೆ

218467-1573234889.jpg
Published on

ಮೌಢ್ಯಕ್ಕೆ ಬಲಿಯಾಗಿ ಕರುಳಿನ ಕುಡಿಗಳನ್ನೇ ಹೊಸಕಿ ಹಾಕಿದ್ದ ಅನಿಲ

.......

ಬೆಳಗಾವಿ: ಮೌಢ್ಯಕ್ಕೆ ಬಲಿಯಾಗಿ ಸ್ವಂತ ಮಕ್ಕಳನ್ನೇ ಕೊಲೆಗೈದವನಿಗೆ 6ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ದಂಡ ಸಹಿತ ಕಠಿಣ ಜೀವಾವಧಿ ಶಿಕ್ಷೆ ವಿಧಿಸಿ ಮಂಗಳವಾರ ತೀರ್ಪು ನೀಡಿದೆ. ಬೆಳಗಾವಿ ತಾಲೂಕಿನ ಕಂಗ್ರಾಳಿ ಕೆ.ಎಚ್. ಗ್ರಾಮದ ಅನಿಲ ಬಾಂದೇಕರ್ ಶಿಕ್ಷೆಗೊಳಗಾದ ಅಪರಾಧಿ. ಅನಿಲ ಬಾಂದೇಕರ ತನ್ನ ಮನೆ ಮಾರಾಟ ಮಾಡಲು ಮುಂದಾದರೂ ಖರೀದಿಗೆ ಯಾರೂ ಬಾರದ ಹಿನ್ನೆಲೆಯಲ್ಲಿ ಮನ ನೊಂದಿದ್ದ. ತನಗಿದ್ದ ಇಬ್ಬರು ಮಕ್ಕಳನ್ನು ಕೊಂದು ತನ್ನ ರಕ್ತವನ್ನು ಶಿವಲಿಂಗಕ್ಕೆ ಅರ್ಪಿಸಿದರೆ ಮನೆ ಮಾರಾಟವಾಗುತ್ತದೆ. ಅಲ್ಲದೆ ಎಲ್ಲ ಕೆಲಸಗಳಲ್ಲೂ ಯಶಸ್ಸು ಸಿಗುತ್ತದೆ ಎಂದು ಆತನಿಗೆ ಕನಸು ಬಿದ್ದಿತ್ತಂತೆ. ಅದನ್ನೇ ನಂಬಿದ ಅನಿಲ ಮಕ್ಕಳಾದ ಅಂಜಲಿ (8) ಮತ್ತು ಅನನ್ಯ (4) ಇಬ್ಬರಿಗೂ ಫಿನಾಯಿಲ್ ಕುಡಿಸಿ, ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ನಂತರ ಬ್ಲೇಡ್‌ನಿಂದ ತನ್ನ ಕೈ ಕೊಯ್ದುಕೊಂಡು ಶಿವಲಿಂಗಕ್ಕೆ ರಕ್ತ ಅರ್ಪಿಸಿದ್ದ. ಕೊಲೆ ಮಾಹಿತಿ ತಿಳಿಯುತ್ತಿದ್ದಂತೆ ಅನಿಲ ಪತ್ನಿ ಜಯಾ, ‘ತಮ್ಮ ಮನೆ ಮುಂದೆ ಮಾಟಮಂತ್ರ ಮಾಡಿಸಿ ಇಟ್ಟಿದ್ದರಿಂದ ಮನನೊಂದು ಮಕ್ಕಳನ್ನು ಕೊಂದಿದ್ದಾರೆ’ ಎಂದು ಪತಿ ವಿರುದ್ಧ ದೂರು ದಾಖಲಿಸಿದ್ದರು. 2021ರ ಜುಲೈನಲ್ಲಿ ಎಪಿಎಂಸಿ ಪೊಲೀಸ್ ಠಾಣೆಯ ವ್ಯಾಪ್ತಿಯ ಕಂಗ್ರಾಳಿ ಕೆ.ಎಚ್.ಗ್ರಾಮದ ರಾಮನಗರ 2ನೇ ಕ್ರಾಸ್ ಮನೆಯಲ್ಲಿ ನಡೆದ ಕೊಲೆ ಪ್ರಕರಣ ಕುರಿತು ಅಂದಿನ ಪೊಲೀಸ್ ಇನ್ಸ್‌ಪೆಕ್ಟರ್ ಮಂಜುನಾಥ ಹಿರೇಮಠ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣ ಕುರಿತು ವಿಚಾರಣೆ ನಡೆಸಿದ 6ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶ

ಎಚ್.ಎಸ್.ಮಂಜುನಾಥ ಅವರು ಅಪರಾಧಿಗೆ ಕಠಿಣ ಜೀವಾವಧಿ ಶಿಕ್ಷೆ ಹಾಗೂ 20 ಸಾವಿರ ರೂ. ದಂಡ ವಿಧಿಸಿ ಮಂಗಳವಾರ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಅಭಿಯೋಜಕಿ ನಸ್ರೀನ್ ಬಂಕಾಪುರ ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net