ಸಾಮೂಹಿಕ ವಿವಾಹದಿಂದ ದುಂದುವೆಚ್ಚಕ್ಕೆ ಕಡಿವಾಣ

MARRIAGE
Published on

ನರೇಗಲ್ಲ: ಸಾಧು ಸಂತರನ್ನು ಎಂದಿಗೂ ಪ್ರಾಪಂಚಿಕ ದೃಷ್ಟಿಯಿಂದ ನೋಡಬಾರದು. ಹಠಯೋಗಿಗಳು, ಸಾಧುಗಳು ನಿರಂತರವಾದ ಆತ್ಮಾನುಸಂಧಾನದಲ್ಲಿದ್ದು ದೇಹಭಾವದಿಂದ ಸಂಪೂರ್ಣ ದೂರವಾಗಿರುತ್ತಾರೆ. ಇಂತಹ ವಿಶೇಷ ಗುಣವನ್ನು ಹೊಂದಿದ್ದವರು ಶ್ರೀ ವೀರಪ್ಪಜ್ಜನವರು. ಅವರಲ್ಲಿನ ಹಠಯೋಗದ ವಿಶೇಷ ಗುಣ ನಮ್ಮೆಲ್ಲರ ಬಾಳಿಗೆ ಬೆಳಕಾಗಿದೆ ಎಂದು ಹೆಬ್ಬಳ್ಳಿಯ ಚೈತನ್ಯ ಆಶ್ರಮದ ದತ್ತಾವಧೂತ ಮಹಾರಾಜರು ಹೇಳಿದರು.

ನರೇಗಲ್ಲ-ಕೋಡಿಕೊಪ್ಪದ ಹಠಯೋಗಿ ವೀರಪ್ಪಜ್ಜನ ಪುಣ್ಯಾರಾಧನೆ ನಿಮಿತ್ತ ಗುರುವಾರ ಬೆಳಗ್ಗೆ ಹಮ್ಮಿಕೊಂಡ 5 ಜೋಡಿಗಳ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.

ಸತ್ಪುರುಷರು ಜೀವಂತವಿದ್ದಾಗ ಎಷ್ಟು ಸಮಾಜದ ಕಾರ್ಯ ಮಾಡುತ್ತಾರೋ, ದೇಹ ಬಿಟ್ಟ ನಂತರ ಅದಕ್ಕಿಂತಲೂ ಹೆಚ್ಚಿನ ಕಾರ್ಯ ಮಾಡುತ್ತಾರೆ. ಅದಕ್ಕೆ ಈಗ ಗದ್ದುಗೆ ರೂಪದಲ್ಲಿರುವ ಶ್ರೀವೀರಪ್ಪಜ್ಜನವರೆ ಸಾಕ್ಷಿ. ಸಮಾಜ ಸುಧಾರಣೆ ಸತ್ಪುರುಷರಿಂದ ಮಾತ್ರ ಸಾಧ್ಯ ಹೊರತು, ಅಧಿಕಾರಿಗಳಿಂದಾಗಲಿ, ರಾಜಕಾರಣಿಗಳಿಂದಾಗಲಿ ಸಾಧ್ಯವಿಲ್ಲ ಎಂದರು.

ಸಾನ್ನಿಧ್ಯ ವಹಿಸಿದ್ದ ಹಂಪಸಾಗರದ ಅಭಿನವ ಶಿವಲಿಂಗ ರುದ್ರಮುನಿ ಶಿವಾಚಾರ್ಯರು ಆಶೀರ್ವಚನ ನೀಡಿ, ದುಂದು ವೆಚ್ಚಗಳನ್ನು ಕಡಿತಗೊಳಿಸುವಲ್ಲಿ ಸಾಮೂಹಿಕ ವಿವಾಹಗಳು ನೆರವಾಗಿವೆ. ದಾಂಪತ್ಯಕ್ಕೆ ಕಾಲಿಟ್ಟ ವಧು-ವರರು ಹೊಂದಾಣಿಕೆಯಿಂದ ಜೀವನ ನಡೆಸಿ ಮಾದರಿಯಾಗಬೇಕು ಎಂದರು.

ನರೇಗಲ್ಲ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ನಿಡಗುಂದಿಕೊಪ್ಪ ಶಾಖಾ ಶಿವಯೋಗ ಮಂದಿರದ ಅಭಿನವ ಚನ್ನಬಸವ ಸ್ವಾಮೀಜಿ, ಪ್ರವಚನಕಾರ ಡಾ. ವಿಶ್ವನಾಥ ಸ್ವಾಮೀಜಿ, ಮೈನಳ್ಳಿ-ಬಿಸರಳ್ಳಿಯ ಸಿದ್ದೇಶ್ವರ ಶಿವಾಚಾರ್ಯರು, ಟ್ರಸ್ಟ್ ಕಮಿಟಿ ಅಧ್ಯಕ್ಷ ಡಾ, ಎಂ. ಸಿ. ಚಪ್ಪನ್ನಮಠ, ಬಸವರಾಜ ದಿಂಡೂರ ಇತರರು ಇದ್ದರು. ಆಕಾಶವಾಣಿ ಕಲಾವಿದ ವೆಂಕಟೇಶ ಕುಲಕರ್ಣಿ ಸಂಗೀತ ಸೇವೆ ನೀಡಿದರು. ಶಿಕ್ಷಕ ಸುರೇಶ ಹಳ್ಳಿಕೇರಿ ಸ್ವಾಗತಿಸಿ, ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net