

| ಮಂಜುನಾಥ ಕೋಳಿಗುಡ್ಡ ಬೆಳಗಾವಿ
ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಡಿ.13ರಿಂದ 24ರವರೆಗೆ ನಡೆಯುವ ವಿಧಾನಮಂಡಲ ಅಧಿವೇಶನಕ್ಕೆ ಆಗಮಿಸುತ್ತಿರುವ ಜನಪ್ರತಿನಿಧಿಗಳು, ಅಧಿಕಾರಿ, ಸಿಬ್ಬಂದಿ ಸೇರಿ ಸುಮಾರು 4,500 ಜನರಿಗೆ ಜಿಲ್ಲಾಡಳಿತ ವಸತಿ ಸೌಲಭ್ಯ ಕಲ್ಪಿಸಿದೆ. 10 ದಿನದ ಚಳಿಗಾಲದ ಅಧಿವೇಶನಕ್ಕಾಗಿ ಸರ್ಕಾರ 12 ಕೋಟಿ ರೂ. ವೆಚ್ಚ ಮಾಡುತ್ತಿದೆ.
ಸಿಎಂ ನಿಯಂತ್ರಣ: ಈ ಹಿಂದಿನ ಅಧಿವೇಶನದಕ್ಕೆ 24 ಕೋಟಿ ರೂ. ವರೆಗೆ ವೆಚ್ಚ ಮಾಡಲಾಗಿತ್ತು. ಬಳಿಕ ಅದೇ ಸಂಪ್ರದಾಯ ಎಂಬಂತೆ 24 ಕೋಟಿ ರೂ. ಮೀರದಂತೆ ವೆಚ್ಚ ಮಾಡಬಹುದೆಂದು ಸರ್ಕಾರದಿಂದ ಅನುಮೋದನೆ ನೀಡಲಾಗುತ್ತಿತ್ತು. ಈ ಬಾರಿ ಕೂಡ ಸಚಿವಾಯಲದಿಂದ 24 ಕೋಟಿ ರೂ.ಗೆ ಪ್ರಸ್ತಾವನೆ ಬಂದಿತ್ತು. ಆದರೆ, ಕಡತ ಪರಿಶೀಲಿಸಿದ ಸಿಎಂ ಬಸವರಾಜ ಬೊಮ್ಮಾಯಿ ಶೇ.50 ವೆಚ್ಚ ಕಡಿತ ಮಾಡಲೇಬೇಕೆಂದು ಷರಾ ಬರೆದರು.
ಸಾವಿರಾರು ಜನರು ಒಂದೆಡೆ ಸೇರುತ್ತಿದ್ದು, ಈ ಬಾರಿ ಕೋವಿಡ್-19 ನಿಯಂತ್ರಣ ನಿಯಮ ಪಾಲನೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ಬಾರಿ ಎಲ್ಲ ವ್ಯವಸ್ಥೆಯನ್ನೂ ಬೆಳಗಾವಿಯಲ್ಲೇ ಕಲ್ಪಿಸಲಾಗುತ್ತಿದ್ದು, ಧಾರವಾಡ ಹಾಗೂ ಹುಬ್ಬಳ್ಳಿ ನಗರದಲ್ಲಿ ವಸತಿಗೆ ಅವಕಾಶ ಇಲ್ಲ. ರಾಜ್ಯದ ವಿವಿಧ ಜಿಲ್ಲೆಗಳಿಂದ ಅಧಿವೇಶನ ಭದ್ರತೆಗಾಗಿ ಆಗಮಿಸುತ್ತಿರುವ ಸುಮಾರು 2,800 ಪೊಲೀಸ್ ಸಿಬ್ಬಂದಿ, 500ಕ್ಕೂ ಅಧಿಕ ಪೊಲೀಸ್ ಅಧಿಕಾರಿಗಳಿಗೆ ನಗರ ಪೊಲೀಸ್ ಆಯುಕ್ತಾಲಯ ವಸತಿ ಸೌಲಭ್ಯ ಕಲ್ಪಿಸುತ್ತಿದೆ. ಅಲ್ಲದೆ, ಶಿಂಧೋಳಿ ಗ್ರಾಮದಲ್ಲಿ ತಾತ್ಕಾಲಿಕ ಪೊಲೀಸ್ ಟೌನ್ಶಿಪ್ ನಿರ್ವಿುಸಲಾಗಿದೆ.
75 ಸಂಘಟನೆಗಳಿಂದ ಪ್ರತಿಭಟನೆ: ಅಧಿವೇಶನ ಸಂದರ್ಭ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟಿಸಲು ಆಗಮಿಸುವವರಿಗಾಗಿಯೇ ಸರ್ಕಾರವು ಹಲಗಾ ಗ್ರಾಮದ ಸುವರ್ಣ ಉದ್ಯಾನವನದಲ್ಲಿ 7 ಟೆಂಟ್, ಕೊಂಡಸಕೊಪ್ಪ ಗ್ರಾಮದಲ್ಲಿ ಒಂದು ಟೆಂಟ್ ವ್ಯವಸ್ಥೆ ಮಾಡಿದೆ. ಸರ್ಕಾರದ ವಿರುದ್ಧ ಪ್ರತಿಭಟಿಸಲು ಈಗಾಗಲೆ ವಿವಿಧ 75 ಸಂಘಟನೆಗಳು ಬೆಳಗಾವಿ ಪೊಲೀಸ್ ಆಯುಕ್ತರಿಂದ ಅನುಮತಿ ಪಡೆದಿವೆ. ಕೋವಿಡ್-19 ಕಾರಣದಿಂದಾಗಿ ಒಂದು ಟೆಂಟ್ನಲ್ಲಿ 500 ಜನರಿಗೆ ಮಾತ್ರ ಪಾಲ್ಗೊಳ್ಳಲು ಅವಕಾಶ ನೀಡಿದೆ. 500ಕ್ಕಿಂತ ಹೆಚ್ಚು ಜನರಿದ್ದಲ್ಲಿ ಸುವರ್ಣ ವಿಧಾನಸೌಧ ಸಮೀಪದ ಕೊಂಡಸಕೊಪ್ಪದಲ್ಲಿ ಇನ್ನೊಂದು ದೊಡ್ಡ ಟೆಂಟ್ ವ್ಯವಸ್ಥೆ ಮಾಡಲಾಗಿದೆ.
ಪೊಲೀಸರನ್ನು ಹೊರತುಪಡಿಸಿ 4,500ಕ್ಕೂ ಅಧಿಕ ಮಂದಿಗೆ 2,100 ರೂಮ್ ಕಾಯ್ದಿರಿಸಲಾಗಿದೆ. ಸರ್ಕಾರದ ಜತೆಗೆ ನೂರಾರು ಖಾಸಗಿ ವಾಹನ ಬಾಡಿಗೆ ಪಡೆದುಕೊಳ್ಳಲಾಗುತ್ತಿದೆ. ದುಂದುವೆಚ್ಚಕ್ಕೆ ಕಡಿವಾಣ ಹಾಕಲಾಗಿದೆ.
| ಡಾ.ಸುರೇಶ ಇಟ್ನಾಳ ಅಧಿವೇಶನ ಉಸ್ತುವಾರಿ