ಆರಗ ಜ್ಞಾನೇಂದ್ರ ಶಿಫಾರಸಿನಂತೆ ಅಕೇಶಿಯಾ ಕಡಿತಲೆ

11hos3p kimmane
ಹೊಸನಗರ ತಾಲೂಕು ಕರಿಮನೆ ಗ್ರಾಪಂ ಮುಂಭಾಗ ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ದೇವಮ್ಮ ಗೋಪಾಲ್, ರಮೇಶ, ಕರುಣಾಕರಶೆಟ್ಟಿ ಇತರರಿದ್ದರು.
Published on

ಹೊಸನಗರ: ಅಕೇಶಿಯಾ ಮರ ಕಡಿತಲೆ ಸಂಬಂಧ ಈ ಹಿಂದಿನ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದ ಆರಗ ಜ್ಞಾನೇಂದ್ರ ಶಿಫಾರಸು ಪತ್ರ ನೀಡಿದ್ದರು. ಅದರಂತೆ ಮರಗಳ ಕಡಿತಲೆ ನಡೆದಿದೆ. ಅಕ್ರಮ ಕಡಿತಲೆ ಎಂದಾದರೆ ಶಾಸಕ ಆರಗ ಜ್ಞಾನೇಂದ್ರ ಮೇಲೂ ಕೇಸು ದಾಖಲಾಗಬೇಕು ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆಗ್ರಹಿಸಿದರು.

ತಾಲೂಕಿನ ಕರಿಮನೆ ಗ್ರಾಪಂ ಮುಂಭಾಗ ಶಾಸಕ ಆರಗ ಜ್ಞಾನೇಂದ್ರ ಮತ್ತು ಅವರ ಬೆಂಬಲಿಗರು ಅಭಿವೃದ್ಧಿಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ನಡೆಸಿದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಕರಿಮನೆ ಗ್ರಾಪಂ ಬೆಳೆಸಿದ್ದ ಬೆಲೆಬಾಳುವ ಅಕೇಶಿಯಾ ಮರ ಕಟಾವು ಸಂಬಂಧ ಅಂದಿನ ಗೃಹ ಸಚಿವ ಆರಗ ಜ್ಞಾನೇಂದ್ರ ಅರಣ್ಯ ಅಧಿಕಾರಿಗಳಿಗೆ ಶಿಫಾರಸು ಪತ್ರ ನೀಡಿದ್ದರು. ಅದರಂತೆ ಮರ ಕಡಿತಲೆ ಪ್ರಕ್ರಿಯೆ ನಡೆದಿದೆ. ಇದೀಗ ಗ್ರಾಪಂ ಅಧ್ಯಕ್ಷರ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಪ್ರಕರಣಕ್ಕೆ ಶಾಸಕ ಆರಗ ಜ್ಞಾನೇಂದ್ರ ಅವರೇ ನೇರ ಹೊಣೆ ಎಂದು ಆರೋಪಿಸಿದರು.
2004ರಲ್ಲಿ ಸ.ನಂ.106ರ 8 ಎಕರೆ ಜಾಗದಲ್ಲಿ ಅಕೇಶಿಯಾ ನಡುತೋಪನ್ನು ಗ್ರಾಪಂನಿಂದಲೇ ನಿರ್ಮಿಸಲಾಗಿತ್ತು. ಅಲ್ಲದೇ ಮುಂದೆ ಅಕೇಶಿಯಾ ಮರಗಳನ್ನು ಕಡಿತಲೆ ಮಾಡಿ ಬಂದ ಹಣವನ್ನು ಅರಣ್ಯ ಅಭಿವೃದ್ಧಿಗೆ ಬಳಸಿಕೊಳ್ಳಲು ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಆದರೆ ಇದನ್ನು ಅಕ್ರಮ ಕಡಿತಲೆ ಎಂದು ಬಿಂಬಿಸಿ ಸಂಸದರೊಂದಿಗೆ ಸೇರಿ ಕಡಿತಲೆಗೆ ಶಿಫಾರಸು ಪತ್ರ ಕೊಟ್ಟ ಆರಗ ಜ್ಞಾನೇಂದ್ರ ಸ್ವತಃ ಪ್ರತಿಭಟನೆ ನಡೆಸಿರುವುದು ಹಾಸ್ಯಾಸ್ಪದ ಎಂದು ಟಾಂಗ್ ಕೊಟ್ಟರು.
ಗ್ರಾಪಂ ಅಧ್ಯಕ್ಷೆ ದೇವಮ್ಮ ಗೋಪಾಲ್, ಉಪಾಧ್ಯಕ್ಷ ರಮೇಶ್ ಹಲಸಿನಹಳ್ಳಿ, ತಾಪಂ ಮಾಜಿ ಅಧ್ಯಕ್ಷೆ ಸುಮಾ ಸುಬ್ರಹ್ಮಣ್ಯ, ನಗರ ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಕರುಣಾಕರ ಶೆಟ್ಟಿ, ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಸತೀಶ್ ಮಳಲಿ, ಚಂದ್ರಶೇಖರ್ ಶೆಟ್ಟಿ, ಪ್ರಕಾಶ್ ಮಳಲಿ, ಅಂಬರೀಶ್ ಸಾದಗಲ್, ಗೋಪಾಲ ಶೆಟ್ಟಿ, ಕಿಶೋರ್, ಪರ್ವತಪ್ಪ ಅಬ್ಬಾಸ್ ಇತರರಿದ್ದರು.
ಸೋಮವಾರ ಎರಡು ಪಕ್ಷಗಳು ಪ್ರತಿಭಟನೆ ನಡೆಸುವ ಸಾಧ್ಯತೆ ಕಂಡು ಬಂದಿದ್ದರಿಂದ ಮುಂಜಾಗ್ರತ ಕ್ರಮವಾಗಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.

ಹೋರಾಟ ಯಾಕೆ ಕೈಬಿಟ್ರಿ?
ಸಂಸದ ಬಿ.ವೈ.ರಾಘವೇಂದ್ರ ಅವರು ಕೇಂದ್ರದಿಂದ ರಾಜ್ಯ ಸರ್ಕಾರಕ್ಕೆ ಬರಬೇಕಾದ 28 ಸಾವಿರ ಕೋಟಿ ರೂ. ತಡೆ ಹಿಡಿದ ಬಗ್ಗೆ ಚಕಾರ ಎತ್ತುತ್ತಿಲ್ಲ. ಅಲ್ಲದೆ ಬಗರ್ ಹುಕುಂ ಸಮಸ್ಯೆ ಬಗ್ಗೆ ಗಮನ ಹರಿಸುತ್ತಿಲ್ಲ. ಅದು ಬಿಟ್ಟು ಗ್ರಾಪಂವರೆಗೆ ಬಂದು ಕಾಂಗ್ರೆಸ್ ಬೆಂಬಲಿತ ಸದಸ್ಯರಿರುವ ಗ್ರಾಪಂಗೆ ಕೆಟ್ಟ ಹೆಸರು ತರುವ ಪ್ರಯತ್ನ ಮಾಡುತ್ತಿದ್ದಾರೆ. ಕಾಂಗ್ರೆಸ್ ಪ್ರತಿಭಟನೆ ಎಂದ ಕೂಡಲೇ ಬಿಜೆಪಿ ಪ್ರತಿಭಟನೆ ಕೈಬಿಟ್ಟಿದೆ. ಈ ವಿಚಾರದಲ್ಲಿ ಅವರು ಧರಣಿ ಮುಂದುವರಿಸಲಿ. ಶಾಸಕ, ಸಂಸದರಿಬ್ಬರೂ ಬರಲಿ. ನಾನು ಬರುತ್ತೇನೆ. ಅಕೇಶಿಯಾ ಪ್ರಕರಣದ ಬಗ್ಗೆ ಚರ್ಚೆಗೆ ಸಿದ್ಧ ಎಂದು ಕಿಮ್ಮನೆ ರತ್ನಾಕರ ಸವಾಲು ಹಾಕಿದರು.
ಸೀರೆ ಹಂಚಲು ಹಣ ಎಲ್ಲಿಂದ ಬಂತು?
ಶಾಸಕ ಆರಗ ಜ್ಞಾನೇಂದ್ರ ಅವರು ನಾನು ಬಡವ. ಗುಮ್ಮಿ ನೀರು ಕುಡಿದು ಬದುಕಿದವನು ಎಂದು ಬೊಬ್ಬಿರಿಯುತ್ತಾರೆ. ಆದರೆ ಮೊನ್ನೆ ತೀರ್ಥಹಳ್ಳಿಯಲ್ಲಿ ವರಮಹಾಲಕ್ಷ್ಮೀ ವ್ರತದ ನೆಪದಲ್ಲಿ 10,000 ಸೀರೆ ಹಂಚಿದ್ದಾರೆ. ನಾನು ಬಡವ ಎಂದು ಹೇಳಿಕೊಳ್ಳುವ ಶಾಸಕರಿಗೆ ಸೀರೆ ಹಂಚಲು ಹಣ ಎಲ್ಲಿಂದ ಬಂತು ಎಂದು ಕಿಮ್ಮನೆ ರತ್ನಾಕರ್ ಪ್ರಶ್ನಿಸಿದರು.
ಧರಣಿ ಹಿಂಪಡೆದ ಬಿಜೆಪಿ
ಅಕೇಶಿಯಾ ಅಕ್ರಮದ ವಿರುದ್ಧ ಅನಿರ್ಧಿಷ್ಟ ಕಾಲದ ಧರಣಿ ನಡೆಸುತ್ತಿದ್ದ ಬಿಜೆಪಿ ಕಾರ್ಯಕರ್ತರು ಮೂರನೇ ದಿನಕ್ಕೆ ಧರಣಿಯನ್ನು ಹಿಂಪಡೆದಿದ್ದಾರೆ. ಜಿಪಂ ಉಪ ಕಾರ್ಯದರ್ಶಿ ಜಯಲಕ್ಷ್ಮೀ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣದ ಬಗ್ಗೆ ತನಿಖೆ ನಡೆಸಿ ಕ್ರಮಕೈಗೊಳ್ಳುವ ಭರವಸೆ ನೀಡಿದ ಕಾರಣ ಧರಣಿಯನ್ನು ಹಿಂಪಡೆಯಲಾಗಿದೆ. ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದ್ದು, ಕ್ರಮ ಕೈಗೊಳ್ಳದಿದ್ದಲ್ಲಿ ಪ್ರತಿಭಟನೆ ಮತ್ತೆ ಆರಂಭಿಸಲಾಗುವುದು ಎಂದು ಧರಣಿ ನೇತೃತ್ವ ವಹಿಸಿದ್ದ ನಗರ ಬಿಜೆಪಿ ಅಧ್ಯಕ್ಷ ಎನ್.ವೈ.ಸುರೇಶ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net