ಗಜೇಂದ್ರಗಡ: ಪಟ್ಟಣದ ಕನ್ನಡಪರ ಸಂಘಟನೆಯ ಮುಖಂಡರೊಬ್ಬರು ಕನ್ನಡದ ಬಾವುಟ ಹೋಲುವ ಬಟ್ಟೆಯ ಮೇಲೆ ಕೇಕ್ ಕತ್ತರಿಸಿ ಜನ್ಮದಿನ ಆಚರಿಸಿಕೊಂಡಿದ್ದು, ಈ ಸಂಗತಿ ಪಟ್ಟಣದಲ್ಲಿ ವಿವಾದವೆಬ್ಬಿಸಿದೆ.
ಬೀದಿಬದಿಯ ವ್ಯಾಪಾರಿಗಳ ಸಂಘಟನೆ, ಡಾ. ರಾಜಕುಮಾರ, ಡಾ. ಶಿವರಾಜಕುಮಾರ, ಕರ್ನಾಟಕ ರಾಜರತ್ನ ಡಾ.ಪುನೀತ ರಾಜಕುಮಾರ ಅಭಿಮಾನಿ ಬಳಗದ ಅಧ್ಯಕ್ಷರೂ ಆಗಿರುವ ಬಾಷೆೆಸಾಬ್ ಕರ್ನಾಚಿ ಇತ್ತೀಚೆಗೆ ಟೀಮ್ ಪವರ್ ಸ್ಟಾರ್ ಡಾನ್ಸ್ ಅಕಾಡೆಮಿಯಲ್ಲಿ ಜನ್ಮದಿನ ಆಚರಿಸಿಕೊಂಡಿದ್ದರು. ಈ ವೇಳೆ ಕನ್ನಡದ ಬಾವುಟ ಹೋಲುವ ಬಟ್ಟೆ ಮೇಲೆ ಕೇಕ್ ಇರಿಸಿ ಕತ್ತರಿಸಿ ಜನ್ಮದಿನ ಆಚರಿಸಲಾಗಿತ್ತು. ಈ ಸಂಭ್ರಮಾಚರಣೆಯ ಫೋಟೊ ಹಾಗೂ ವಿಡಿಯೋಗಳನ್ನು ಅವರೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಇವುಗಳನ್ನು ನೋಡಿದ ಹಲವು ಕನ್ನಡಪರ ಸಂಘಟನೆ ಮುಖಂಡರು, ಕನ್ನಡಾಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕ್ಷಮೆಯಾಚನೆ: ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಡಾನ್ಸ್ ಅಕಾಡೆಮಿಯ ಮುಷ್ತ್ತಾಕ್ ಹಾಗೂ ಬಾಷೆಸಾಬ್ ಕರ್ನಾಚಿ ಕ್ಷಮೆಯಾಚಿಸಿದ್ದು, ಅಚಾತುರ್ಯದಿಂದ ಈ ಘಟನೆ ನಡೆದಿದೆ. ಇದಕ್ಕಾಗಿ ಕನ್ನಡಿಗರು ಕ್ಷಮಿಸಬೇಕು ಎಂದಿದ್ದಾರೆ.
ಕನ್ನಡ ಭಾಷೆ, ಧ್ವಜ, ನೆಲದ ಬಗ್ಗೆ ಅಪಾರ ಗೌರವ ಇಟ್ಟುಕೊಂಡು ಕನ್ನಡಪರ ಸಂಘಟನೆ ಸದಸ್ಯರೇ ಹೀಗೆ ಮಾಡಿರುವುದು ಸರಿಯಲ್ಲ. ಇದು ಅವಿವೇಕದ ಪರಮಾವಧಿ ಎಂದು ಕರ್ನಾಟಕ ಅಭಿವೃದ್ಧಿ ವೇದಿಕೆ ಅಧ್ಯಕ್ಷ ವಿನಾಯಕ ಜರತಾರಿ ಪ್ರತಿಕ್ರಿಯಿಸಿದ್ದಾರೆ.