ಆಚಾರ, ವಿಚಾರ-ಸಂಸ್ಕೃತಿ ಬಣಜಿಗರ ಜೀವಾಳ

Customs, ideology and culture are the lifeblood of the Banajigas.
ಬನಹಟ್ಟಿ ನಗರದ ಬಸವೇಶ್ವರ ಸಮುದಾಯ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಬಕವಿ-ಬನಹಟ್ಟಿ ತಾಲೂಕು ಬಣಜಿಗ ಘಟಕದ ವಾರ್ಷಿಕೋತ್ಸವ, ವಿಶೇಷ ಸಾಧಕರಿಗೆ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಶ್ರೀಗುರುಸಿದ್ದೇಶ್ವರ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಸಮಾಜದ ತಾಲೂಕು ಅಧ್ಯಕ್ಷ ಈಶ್ವರ ಬಿದರಿ, ರಾಮಕೃಷ್ಣ ದೇವರು, ಮಲ್ಲಿಕಾರ್ಜುನ ರೂಡಗಿ ಇದ್ದರು.
Published on

ರಬಕವಿ-ಬನಹಟ್ಟಿ: ಸಂಪ್ರದಾಯ, ಸಂಸ್ಕಾರ ಮತ್ತು ಧಾರ್ಮಿಕ ಆಚರಣೆಗಳಿಂದ ಜೈನ್ ಧರ್ಮಿಯರ ಬಳಿಕ ಬಣಜಿಗರು ಮಂಚೂಣಿಯಲ್ಲಿದ್ದಾರೆ. ಸಂಸ್ಕಾರ ಮತ್ತು ಕಾಯಕವೇ ಅವರ ಜೀವಾಳ ಎಂದು ರಬಕವಿ ಗುರುದೇವ ಬ್ರಹ್ಮಾನಂದ ಆಶ್ರಮದ ಶ್ರೀ ಗುರುಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು.

ಬನಹಟ್ಟಿಯ ಬಸವೇಶ್ವರ ಸಮುದಾಯ ಭವನದಲ್ಲಿ ಭಾನುವಾರ ರಬಕವಿ-ಬನಹಟ್ಟಿ ತಾಲೂಕು ಬಣಜಿಗ ಸಮಾಜ ಆಯೋಜಿಸಿದ್ದ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ ಮತ್ತು ವಿಶೇಷ ಸಾಧಕರ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಗುರು, ಲಿಂಗ, ಜಂಗಮ, ಪಾದೋದಕ, ರುದ್ರಾಕ್ಷಿ, ಭಸ್ಮ ಮೊದಲಾದ ಆಚರಣೆಗಳನ್ನು ಆಧುನಿಕ ಬದುಕಲ್ಲೂ ಪಾಲಿಸುವುದೇ ಧ್ಯೇಯ ಎಂಬಂತೆ ಸಮಾಜ ನಡೆದುಕೊಂಡಿದೆ ಎಂದರು.

ಆಧುನಿಕತೆಯಲ್ಲೂ ನಮ್ಮ ಧರ್ಮಾಚರಣೆ, ಸಂಸ್ಕೃತಿ ಮರೆಯದೆ ಮುಂದಿನ ಪೀಳಿಗೆಗೂ ಬೋಧಿಸಬೇಕು. ಪ್ರತಿಯೊಬ್ಬ ಬಣಜಿಗ ಮಡಿ, ಮೈಲಿಗೆ ಹಂಗಿಲ್ಲದ ಲಿಂಗಧಾರಣೆ ಕಡ್ಡಾಯವಾಗಿ ಧರಿಸುವ ಮೂಲಕ ಸಮಾಜ ಸಂಘಟಿತರಾಗಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನೆರವು ಕಲ್ಪಿಸಿ ಸಮುದಾಯ ಬಲಿಷ್ಠಗೊಳಿಸಬೇಕು. ಕ್ರೈಸ್ತ್, ಇಸ್ಲಾಂ ಧರ್ಮಿಯರಂತೆ ನಮ್ಮಲ್ಲೂ ಧರ್ಮಾಚರಣೆ ರಕ್ತಗತವಾಗಬೇಕು. ಹಿರಿಯರ ಆಸ್ತಿಗೆ ಮಾತ್ರ ವಾರಸುದಾರರಾಗದೆ ಅವರು ಪಾಲಿಸಿದ್ದ ಸಂಸ್ಕಾರ, ಆಚರಣೆಗಳು ಮತ್ತು ಧರ್ಮಶ್ರದ್ಧೆ ನಮ್ಮ ಆದ್ಯ ಕರ್ತವ್ಯವಾಗಬೇಕು ಎಂದು ಹೇಳಿದರು.

ಮರೆಗುದ್ದಿಯ ರಾಮಕೃಷ್ಣ ದೇವರು ಮಾತನಾಡಿ, ಸಮಾಜದ ಸಂಕೇತ ತಕ್ಕಡಿ ಯಾವತ್ತೂ ತೂಗಿದ ವಸ್ತುವನ್ನು ತನ್ನೊಳಗೆ ಇರಿಸಿಕೊಳ್ಳುವುದಿಲ್ಲ. ತೂಗಿದ ಬಳಿಕ ಎಂಥದೇ ಬೆಲೆಯುತ ವಸ್ತುವಾದರೂ ಅದನ್ನು ಖಾಲಿಯಾಗಿಸುತ್ತದೆ. ಈ ಸೂತ್ರ ನಮ್ಮ ಬದುಕಿಗೆ ಸತ್ಯ ಪಾಠವಾಗಿದೆ. ತ್ಯಾಗ ಗುಣದ ಸಂಕೇತವಾದ ತಕ್ಕಡಿಯಂತೆ ನಾವು ಬದುಕಿದಾಗ ಮಾತ್ರ ಅದು ಸಮಾಜಮುಖಿ ಬದುಕಾಗುತ್ತದೆ ಎಂದರು.

ಬಣಜಿಗ ಸಮಾಜದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ರೂಡಗಿ ಮಾತನಾಡಿ, ನಮ್ಮ ಧರ್ಮದ ಸಂಸ್ಕೃತಿ, ಸಂಸ್ಕಾರ ಮುಂದಿನ ಪೀಳಿಗೆಗೂ ಕಲಿಸುವ ಹೊಣೆ ಪಾಲಕರ ಮೇಲಿದೆ. ಸಮಾಜ ಸಂಘಟನೆಯಿಂದ ಇತರರಿಗೆ ನೆರವಾಗಲು ಸಾಧ್ಯವಾಗುತ್ತದೆ. ಶಿಕ್ಷಣದ ಜೊತೆಗೆ ಧಾರ್ಮಿಕ ನೀತಿ, ನಿಯಮಗಳನ್ನು ಮಕ್ಕಳಿಗೆ ನೀಡಬೇಕಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿಶೇಷ ಸಾಧಕರಿಗೆ ಮತ್ತು ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ತಾಲೂಕು ಅಧ್ಯಕ್ಷ ಈಶ್ವರ ಬಿದರಿ ಅಧ್ಯಕ್ಷತೆ ವಹಿಸಿದ್ದರು. ತಹಸೀಲ್ದಾರ್ ಗಿರೀಶ ಸ್ವಾದಿ, ಸಮಾಜದ ಜಿಲ್ಲಾಧ್ಯಕ್ಷ ಶರಣಪ್ಪ ಗುಳೇದ, ಡಾ.ವಿಜಯ ಹಂಚಿನಾಳ, ಹಿರಿಯ ನ್ಯಾಯಾಧೀಶ ಜಿ.ಆರ್.ಶೆಟ್ಟರ, ಚಂದ್ರಶೇಖರ ಹುಲಗಬಾಳಿ, ಕಲ್ಲಪ್ಪ ತಂಬಾಕು, ಮಲ್ಲಿಕಾರ್ಜುನ ಹುಲಗಬಾಳಿ, ಮಹಾಲಿಂಗಪ್ಪ ಕುಳ್ಳೊಳ್ಳಿ, ಸೋಮಶೇಖರ ಕೊಟ್ರಶೆಟ್ಟಿ, ಬಸವರಾಜ ತೆಗ್ಗಿ, ಅಶೋಕ ಅಂಗಡಿ, ಶ್ರೀಶೈಲ ಮೋದಿ, ಶಿವಪ್ಪ ಬಾಗಲಕೋಟ, ಶಂಕರ ಬಟಕುರ್ಕಿ, ಉಮೇಶ ಹನಗಂಡಿ, ಬಶೆಟ್ಟೆಪ್ಪ ಕುಂಚನೂರ, ಪ್ರಕಾಶ ಟೆಂಗಿನಕಾಯಿ, ಜಯವಂತ ಗುಳ್ಳ ಉಪಸ್ಥಿತರಿದ್ದರು. ಮಲ್ಲಿಕಾರ್ಜುನ ಗಡೆನ್ನವರ ಪ್ರಾರ್ಥಿಸಿದರು. ವಿಜಯಕುಮಾರ ಹಲಕುರ್ಕಿ ಸ್ವಾಗತಿಸಿದರು. ರವೀಂದ್ರ ಅಷ್ಟಗಿ, ಎಂ.ಬಿ. ಶೆಟ್ಟಿ ನಿರೂಪಿಸಿದರು. ಮಹಾಶಾಂತ ಶೆಟ್ಟಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net