ವಂಚನೆಗೀಡಾಗುತ್ತಿದ್ದರೂ ದಾಖಲೆ ಸಮೇತ ದೂರು‌ ನೀಡದ ಗ್ರಾಹಕರು: ಬೇಸರ

27cbp1.jpg
Published on

ಚಿಕ್ಕಬಳ್ಳಾಪುರ: ಯಾವುದೇ ಉತ್ಪನ್ನ ಖರೀದಿ ಹಾಗೂ ಸೇವೆ ಪಡೆಯುವಲ್ಲಿನ ಹಕ್ಕುಗಳ ಬಳಕೆಯಲ್ಲಿ ಗ್ರಾಹಕನೇ ಸಾರ್ವಭೌಮ ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶೆ ನೇರಳೆ ವೀರಭದ್ರಯ್ಯ ಭವಾನಿ ತಿಳಿಸಿದರು.
ಚಿಕ್ಕಬಳ್ಳಾಪುರ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿ.ಪಂ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಜಿಲ್ಲಾ ವಕೀಲರ ಸಂಘ, ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖೆಯು ಕೈಗೊಂಡಿದ್ದ "ವಿಶ್ವ ಗ್ರಾಹಕರ ಹಕ್ಕುಗಳ ದಿನವನ್ನು ಉದ್ಘಾಟಿಸಿ ಮಾತನಾಡಿದರು.
ವಹಿವಾಟಿನಲ್ಲಿ ಸಂಬಂಧಪಟ್ಟ ವ್ಯಾಪಾರಸ್ಥ ಅಥವಾ ಮಾರಾಟಗಾರನಿಂದ ಅಧಿಕೃತ ರಸೀಧಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಕಾನೂನು ರಕ್ಷಣಾತ್ಮಕ ವಿಚಾರಗಳನ್ನು ತಿಳಿದುಕೊಂಡಿರಬೇಕು ಎಂದರು.
ಇತ್ತೀಚಿಗಿನ ದಿನಗಳಲ್ಲಿ ಜನರು ಸೇವಿಸುವ ಪೌಷ್ಟಿಕಾಹಾರದಲ್ಲಿ ಕೀಟ ನಾಶಕಗಳ ಬಳಕೆಯು ಹೆಚ್ಚುತ್ತಿರುವುದು ಒಂದು ಗಂಭೀರ ಸಮಸ್ಯೆ. ಕೀಟ ನಾಶಕಗಳನ್ನು ಆಹಾರ ಉತ್ಪಾದನೆಯಲ್ಲಿ ಕೀಟಗಳನ್ನು ನಿಯಂತ್ರಿಸಲು ಬಳಸಲಾಗುತ್ತದೆ, ಆದರೆ, ಮಾರಕ ಅಂಶಗಳು ಮಾನವ ದೇಹವನ್ನು ಸೇರಿ ಆರೋಗ್ಯವನ್ನು ಕೆಡಿಸುತ್ತಿವೆ. ಹಲವು ವರ್ಷಗಳ ಹಿಂದೆ ವಾರ್ಷಿಕವಾಗಿ ಕೇವಲ ಒಂದು ಬೆಳೆಯನ್ನು ಮಾತ್ರ ಬೆಳೆಯಲಾಗುತ್ತಿತ್ತು. ಈಗ  ವಾರ್ಷಿಕ 3 ಬೆಳೆಗಳನ್ನು ಬೆಳೆಯುತ್ತಿರುವುದರಿಂದ ಆಹಾರದಲ್ಲಿ ಗುಣಮಟ್ಟ ಹಾಗೂ ಪೌಷ್ಟಿಕತೆ ಕಡಿಮೆಯಾಗಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಮಾತನಾಡಿ, ಗ್ರಾಹಕರು ವಸ್ತುಗಳನ್ನು ಖರೀದಿಸುವ ಇಲ್ಲವೇ ಸೇವೆ ಪಡೆಯುವ ವೇಳೆ ಗುಣಮಟ್ಟ ಹಾಗೂ ಪ್ರಮಾಣ, ಬಳಕೆಯ ಬಗ್ಗೆ ಸಮರ್ಪಕವಾಗಿ  ಮಾಹಿತಿ ತಿಳಿದುಕೊಳ್ಳಬೇಕು. ಹಾಗೆಯೇ ಸೂಕ್ತ ಅಧಿಕೃತ ದಾಖಲೆಗಳನ್ನು ಹೊಂದಿರಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಶಿಲ್ಪ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ್ ಕೆಳಗಿನಮನಿ, ಜಿಲ್ಲಾ ಗ್ರಾಹಕ ವ್ಯವಹಾರಗಳ ಪರಿಹಾರ ಆಯೋಗದ ಅಧ್ಯಕ್ಷ ಕುಮಾರ್, ಸದಸ್ಯ ಜನಾರ್ದನ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಮುನಿರಾಜು ಮತ್ತಿತರರು ಇದ್ದರು.

*ದೂರು ಸಲ್ಲಿಸಬಹುದು
ವಿಶ್ವ ಗ್ರಾಹಕರ ಹಕ್ಕುಗಳ ದಿನ ಆಚರಣೆಯ ಮೂಲಕ ಗ್ರಾಹಕರಿಗೆ ಹಕ್ಕುಗಳ ಬಗ್ಗೆ ಶಿಕ್ಷಣ ಮತ್ತು ಗರಿಷ್ಠ ಪ್ರಯೋಜನಗಳನ್ನು ಪಡೆಯಲು ಸಹಾಯ ಮಾಡುವುದು ಹೇಗೆ? ವಂಚನೆಗಳನ್ನು ತಡೆಯುವುದು, ಲೋಪಗಳಿಗೆ ದಂಡ ವಿಧಿಸುವುದು ಸೇರಿದಂತೆ ಇತರ ವಿಚಾರಗಳ ಬಗ್ಗೆ ಅರಿವು ಮೂಡಿಸಲಾಗುತ್ತದೆ. ಗ್ರಾಹಕಕರು ಅನ್ಯಾಯವಾದಲ್ಲಿ ಅಗತ್ಯ ದಾಖಲೆಗಳೊಂದಿಗೆ ಗ್ರಾಹಕರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಬಹುದು ಆಹಾರ ಆಯೋಗದ ಅಧ್ಯಕ್ಷ ಎನ್. ಕುಮಾರ್ ತಿಳಿಸಿದರು.

*ಭಿತ್ತಿ ಪತ್ರಗಳ ಬಿಡುಗಡೆ
ಗ್ರಾಹಕರ ಹಕ್ಕುಗಳು ಹಾಗೂ ಕಾನೂನು ನಿಯಮಗಳ ಬಗ್ಗೆ ಜಿಲ್ಲಾ ವಕೀಲ ಸಂಘದ ಅಧ್ಯಕ್ಷ ಕೆ.ವಿ ಅಭಿಲಾಷ್ ಉಪನ್ಯಾಸ ನೀಡಿದರು.  ಸುಸ್ಥಿರ ಜೀವನ ಶೈಲಿಗೆ ಒಂದು ಸರಳ ಪರಿವರ್ತನೆ ಎಂಬ ಘೋಷ ವಾಕ್ಯದ ಕಾರ್ಯಕ್ರಮದಲ್ಲಿ ಗ್ರಾಹಕರ ಜಾಗೃತಿಗಾಗಿ ಪ್ರಚಾರದ ಕರಪತ್ರಗಳು ಹಾಗೂ ಭಿತ್ತಿ ಪತ್ರಗಳನ್ನು ಗಣ್ಯರು ಬಿಡುಗಡೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net