ಬಳ್ಳಾರಿ : ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಬೆಳಕಿನ ಹಬ್ಬ ದೀಪಾವಳಿ ಆಚರಣೆಗೆ ಉತ್ಸಾಹದಿಂದ ನಡೆಯಿತು. ಇಲ್ಲಿನ ವಾಣಿಜ್ಯ ಮಳಿಗೆಗಳು ಹಾಗೂ ಕಚೇರಿಗಳು ಸ್ವಚ್ಛಗೊಳಿಸಿ ಪೂಜೆಗೆ ಸಿದ್ಧಗೊಳಿಸಲಾಗಿತ್ತು. ವಿದ್ಯುತ್ ದೀಪಗಳಿಂದ ಅಲಂಕಾರಿಸಲಾಗಿತ್ತು.
ಇಲ್ಲಿನ ಐಟಿಐ ಕಾಲೇಜು ಮೈದಾನದಲ್ಲಿ ಪಟಾಕಿ ಕೊಳ್ಳಲು ಜನರು ತಂಡೋಪತಂಡವಾಗಿ ಕೊಳ್ಳುತ್ತಿರುವುದು ಕಂಡು ಬಂತು. ಮೈದಾನದಲ್ಲಿ ಹಾಕಿದ್ದ ಇಪ್ಪತ್ತು ಪಟಾಕಿ ಮಳಿಗೆಗಳಲ್ಲಿ ಜನರು ತುಂಬಿ ತುಳುಕಿತ್ತಿದ್ದರು. ಬೆಲೆ ಅಧಿಕವಿದ್ದರೂ ತಮಗೆ ಇಷ್ಟವಾದ ಪಟಾಕಿಗಳ ಖರೀದಿಯಲ್ಲಿ ತೊಡಗಿದ್ದರು.
ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಆದರೆ, ಮಾರುಕಟ್ಟೆಯಲ್ಲಿ ಹೊಸಬಟ್ಟೆ, ಹೂ, ಹಣ್ಣು, ಪಟಾಕಿ, ಹಣತೆಗಳೂ ಸೇರಿ ಇತರೆ ವಸ್ತುಗಳ ಭರಾಟೆ ಜೋರಾಗಿತ್ತು. ಅದಾಗ್ಯೊ ಖರೀದಿ ಮಾತ್ರ ಕಡಿಮೆಯಾಗಿಲ್ಲ. ನಗರದ ಎಪಿಎಂಸಿ ಮಾರುಕಟ್ಟೆ, ಬೆಂಗಳೂರು ರಸ್ತೆ, ಕನಕ ದುರ್ಗಮ್ಮ ದೇವಸ್ಥಾನ ಬಳಿ, ಹೂವಿನ ಮಾರುಕಟ್ಟೆ, ಕೌಲಬಜಾರ್, ಗಾಂಧಿನಗರ ಮಾರುಕಟ್ಟೆಯಲ್ಲಿ ಜನ ಪೂಜಾ ಸಾಮಗ್ರಿಗಳ ಖರೀದಿಸಿದರು. ಹಣ್ಣು, ತರಕಾರಿ, ಹೂ, ಅಗತ್ಯ ವಸ್ತುಗಳ ಬೆಲೆ ಏರಿಕೆವಾಗಿದ್ದರೂ ಗ್ರಾಹಕರ ಖರೀದಿಗೆ ಮುಗಿ ಬಿದ್ದಿದ್ದರು. ಮಾರುಕಟ್ಟೆಗಳು ಮಾತ್ರವಲ್ಲದೇ ನಗರದ ಪ್ರಮುಖ ರಸ್ತೆಗಳೂ ಮಾರುಕಟ್ಟೆಯಾಗಿ ಪರಿಣಮಿಸಿದ್ದವು. ದೀಪಾವಳಿ ಹಿನ್ನೆಲೆಯಲ್ಲಿ ಹೂವು, ಹಣ್ಣುಗಳು, ತರಕಾರಿ, ದಿನಸಿಗಳು ಹೆಚ್ಚಿನ ಬೆಲೆ ಕುದುರಿಸಿಕೊಂಡಿವೆ. ನಿತ್ಯದ ಮಾರಾಟದ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಆಗುತ್ತಿವೆ. ಬಟ್ಟೆ ಅಂಗಡಿಗಳಲ್ಲಿ ಜನವೋ ಜನ. ನಗರದ ಇನ್‌ಫ್ಯಾಂಟ್ರಿ ರಸ್ತೆಯಲ್ಲಿ ಹತ್ತಾರು ಬ್ರಾಂಡೆಡ್ ಬಟ್ಟೆಗಳ ಮಳಿಗೆಗಳಿದ್ದು ಅವುಗಳೆಗಲ್ಲಿ ಜನವೋ ಜನ. ಇಷ್ಟು ದಿನ ಬಣಗುಡುತ್ತಿದ್ದ ಅಂಗಡಿಗಳಲ್ಲಿ ಈಗ ಕಾಲಿಡಲೂ ಸಾಧ್ಯವಿಲ್ಲ ಎಂಬ ಸ್ಥಿತಿಯಿತ್ತು. ಹಬ್ಬಕೆಂದು ಹೊಸ ಹೊಸ ಟ್ರೆಂಡಿಂಗ್ ಬಟ್ಟೆಗಳು ಬಂದಿದ್ದೂ ಗ್ರಾಹಕರೂ ಖುಷಿಯಿಂದಲೇ ಖರೀದಿ ಮಾಡುತ್ತಿದ್ದ ದೃಶ್ಯ ಕಂಡು ಬಂತು.