ನ್ಯಾಯಬೆಲೆ ಅಂಗಡಿಗಳಲ್ಲಿ ಸರತಿ ಸಾಲು

Ration Shop
ಮೂಲ್ಕಿಯ ಅತಿಕಾರಿಬೆಟ್ಟು ಪಡಿತರ ಅಂಗಡಿಯಲ್ಲಿ ಬಿಸಿಲಿಗೆ ಕಾದು ನಿಂತ ಪಡಿತರ ಚೀಟಿದಾರರು.
Published on

ಮಂಗಳೂರು/ಮೂಲ್ಕಿ: ರಾಜ್ಯಾದ್ಯಂತ ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ವರ್ ಸಮಸ್ಯೆಯಿಂದಾಗಿ ಕಳೆದ ಮೂರು ದಿನಗಳಿಂದ ಗ್ರಾಹಕರು ಪರದಾಡುವಂತಾಗಿದ್ದು, ದುರಸ್ತಿಯಲ್ಲಿರುವ ಸರ್ವರ್ ಮೇಲೆ ಒತ್ತಡ ಹೆಚ್ಚಾಗಿರುವುದೇ ಇದಕ್ಕೆ ಕಾರಣ ಎಂದು ಇಲಾಖೆ ಮಾಹಿತಿ ನೀಡಿದೆ.

ಜೂನ್ 28ರಿಂದ ಆಹಾರ ಇಲಾಖೆಯ ಪಡಿತರ ವಿತರಣಾ ವಿಭಾಗದ ಸರ್ವರ್ ನಿರ್ವಹಣಾ ಕಾರ್ಯ ನಡೆಸಲು ತೀರ್ಮಾನಿಸಿದ್ದು, ಜೂನ್ 27ರ ಒಳಗಾಗಿ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಪಡೆಯುವಂತೆ ವಾರದ ಹಿಂದೆಯೇ ಇಲಾಖೆ ಸೂಚನೆ ನೀಡಲಾಗಿತ್ತು. ಇಲಾಖೆ ಸೂಚನೆ ನೀಡಿದ ಬೆನ್ನಲ್ಲೇ ರಾಜ್ಯದ ಬಹುತೇಕ ಜನ ಪಡಿತರ ಪಡೆಯಲು ನ್ಯಾಯಬೆಲೆ ಅಂಗಡಿಗೆ ದೌಡಾಯಿಸಿದ್ದು, ಏಕಕಾಲದಲ್ಲಿ ಸರ್ವರ್ ಮೇಲೆ ಹೆಚ್ಚಿನ ಒತ್ತಡ ಬಿದ್ದಿದ್ದರಿಂದ ಎಲ್ಲ ಕಡೆಗಳಲ್ಲಿ ಸರ್ವರ್ ಸಮಸ್ಯೆ ಎದುರಾಗಿದೆ. ಈಗ ಆದೇಶವನ್ನು ಪರಿಷ್ಕರಿಸಲಾಗಿದ್ದು, ಪಡಿತರ ಪಡೆಯಲು ಜೂನ್ 30ರವರೆಗೆ ಅವಕಾಶ ನೀಡಲಾಗಿದೆ ಎಂದು ಆಹಾರ ಇಲಾಖೆ ಮಾಹಿತಿ ನೀಡಿದೆ.

ಮೊದಲೇ ಅಪ್‌ಡೇಟ್

ಆಹಾರ ಇಲಾಖೆ ಸರ್ವರ್ ಅಪ್‌ಡೇಟ್ ಪ್ರಕ್ರಿಯೆ ನಿಗದಿತ ದಿನಕ್ಕಿಂತ ಮೊದಲೇ (ಜೂನ್ 21ರಂದು) ಕೈಗೆತ್ತಿಕೊಂಡಿರುವುದೂ ಸಮಸ್ಯೆಗೆ ಕಾರಣ. ಇದರಿಂದಾಗಿ ಸರ್ವರ್ ಸಮಸ್ಯೆಯಾಗಿದ್ದು, ಕೆಲವು ಭಾಗದಲ್ಲಿ ನಿಧಾನ ಗತಿಯಿಂದ ಪಡಿತರ ವಿತರಣೆಯ ಕಾರ್ಯ ನಡೆದಿದೆ.

ವಿಟ್ಲದಲ್ಲಿ ಎರಡು ದಿನಗಳಲ್ಲಿ ಇಲ್ಲದ ಸಮಸ್ಯೆ ಶುಕ್ರವಾರ ತಲೆದೋರಿದ್ದು, ಒಬ್ಬ ವ್ಯಕ್ತಿಗೆ 15 ನಿಮಿಷವನ್ನು ತೆಗೆದುಕೊಳ್ಳುತ್ತಿತ್ತು. ಕಡಬದಲ್ಲಿ ಜೂನ್ 21ರಂದು ಸರ್ವರ್ ಇರಲಿಲ್ಲವಾದರೂ, ಗುರುವಾರ ಹಾಗೂ ಶುಕ್ರವಾರ ನಿಧಾನ ಗತಿಯಿಂದ ಪಡಿತರ ಹಂಚಿಕೆ ಕಾರ್ಯ ನಡೆದಿದೆ. ಸುಳ್ಯ, ಪುತ್ತೂರಿನಲ್ಲೂ ಇದೇ ರೀತಿಯಲ್ಲಿ ಇದ್ದು, ಅಧಿಕಾರಿಗಳಿ ಪಡಿತರ ಅಂಗಡಿಗಳ ಜತೆಗೆ ನಿರಂತರ ಸಂಪರ್ಕದಲ್ಲಿದ್ದು, ಅಗತ್ಯ ವ್ಯವಸ್ಥೆಗಳನ್ನು ಕೈಗೊಳ್ಳುತ್ತಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿ ಅಕ್ಕಿ ಸಹಿತ ಇನ್ನಿತರ ವಸ್ತುಗಳನ್ನು ಪಡೆಯಲು ಮಹಿಳೆಯರು, ವೃದ್ಧರು ತಮ್ಮ ಕೆಲಸಗಳನ್ನು ಬದಿಗಿಟ್ಟು ನ್ಯಾಯಬೆಲೆ ಅಂಗಡಿಗೆ ಬರುತ್ತಿದ್ದು, ಅಂಗಡಿ ಎದುರು ದಿನ ಪೂರ್ತಿ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ.

ಜೂನ್ ಹಾಗೂ ಜುಲೈ ತಿಂಗಳಲ್ಲಿ ಬೇಸಾಯ ಹಾಗೂ ಅಡಕೆ ತೋಟಗಳಲ್ಲಿ ಕೃಷಿ ಚಟುವಟಿಕೆಗಳ ದಿನವಾಗಿದ್ದು, ಮೊದಲೇ ಕೂಲಿಯಾಳುಗಳ ಕೊರತೆ ಇದೆ. ಈ ನಡುವೆ ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ವರ್ ಸಮಸ್ಯೆಯಿಂದ ಗಂಟೆಗಟ್ಟಲೆ ಕಾದು ಸಮಯ ವ್ಯರ್ಥವಾಗಿ ಸರ್ಕಾರಕ್ಕೆ ಗ್ರಾಮೀಣ ಪ್ರದೇಶದ ರೈತರು ಹಾಗೂ ಕೃಷಿಕರು ಹಿಡಿಶಾಪ ಹಾಕುತ್ತಿದ್ದಾರೆ.

ತಿದ್ದುಪಡಿ ಸ್ಥಗಿತ

ಸರ್ಕಾರದ ಯೋಜನೆ ಫಲಾನುಭವಿಯಾಗಲು ಸಮರ್ಪಕ ಪಡಿತರ ಚೀಟಿ ಅಗತ್ಯವಿದ್ದು, ಜೂನ್ ಮೊದಲ ವಾರದವರೆಗೆ ಪಡಿತರ ಚೀಟಿ ತಿದ್ದುಪಡಿಗೆ ಅವಕಾಶವಿತ್ತು. ಪ್ರಸ್ತುತ ವೆಬ್‌ಸೈಟ್‌ಗಳು ದುರಸ್ತಿ, ನಿರ್ವಹಣಾ ಕಾರ್ಯದ ನೆಪವೊಡ್ಡಿ ಪಡಿತರ ಚೀಟಿ ತಿದ್ದುಪಡಿ ಸ್ಥಗಿತಗೊಂಡಿದೆ.

ಇಲಾಖೆಯ ಕಾರ್ಯಚಟುವಟಿಕೆಗಳ ಜಾಲತಾಣಗಳ ತುರ್ತು ದುರಸ್ತಿ ಕಾರ್ಯ ನಡೆಯುತ್ತಿರುವುದರಿಂದ ಸರ್ವರ್ ಮೇಲೆ ಒತ್ತಡ ಹೆಚ್ಚಾಗಿ ಸರ್ವರ್ ಸಮಸ್ಯೆಯಾಗಿದೆ. ಈ ಪರಿಸ್ಥಿತಿ ಸರಿಯಾಗುವ ಭರವಸೆ ಇದೆ. ಒಂದೆರಡು ದಿನಗಳಲ್ಲಿ ಸರ್ವರ್ ಸಮಸ್ಯೆ ಸರಿಯಾಗಲಿದೆ.- ಮಾಣಿಕ್ಯ ಜೈನ್, ಪ್ರಭಾರ ಅಧಿಕಾರಿ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ದ.ಕ.

ಮೂರು ದಿನಗಳಿಂದ ರಾಜ್ಯಾದ್ಯಂತ ಸರ್ವರ್ ಸಮಸ್ಯೆ ಉಂಟಾಗಿದೆ. ಇದರಿಂದ ಅಕ್ಕಿ ವಿತರಣೆ ಸಾಧ್ಯವಾಗುತ್ತಿಲ್ಲ. ಜಿಲ್ಲೆಯಲ್ಲಿ ಸುಮಾರು 380 ರೇಶನ್ ಅಂಗಡಿಗಳಿದ್ದು, ಸಾಮಾನ್ಯವಾಗಿ ಪ್ರತಿ ತಿಂಗಳು 27ಕ್ಕೆ ಪಡಿತರ ವಿತರಣೆ ಕೊನೆಯಾಗುತ್ತದೆ. ಈ ಬಾರಿ ಸರ್ವರ್ ಸಮಸ್ಯೆ ಕಾರಣದಿಂದ 30ರವರೆಗೂ ಅಕ್ಕಿ ವಿತರಿಸುವಂತೆ ಆಹಾರ ಇಲಾಖೆ ಆಯುಕ್ತರಿಂದ ಆದೇಶ ಬಂದಿದೆ.- ಬಿನೋಯ್, ಉಪನಿರ್ದೇಶಕ, ಆಹಾರ ಇಲಾಖೆ, ಉಡುಪಿ

ಗೃಹಜ್ಯೋತಿ ನೋಂದಣಿಗೆ ಹೋದರೆ ಅಲ್ಲೂ ಸರ್ವರ್ ಸಮಸ್ಯೆ, ಪಡಿತರಕ್ಕಾಗಿ ಬಂದರೆ ಇಲ್ಲೂ ಕಾಯಬೇಕು. ಒಟ್ಟಾರೆ ಸಮಸ್ಯೆಯಾಗಿದೆ. ಪಡಿತರಕ್ಕಾಗಿ ಮೂರು ದಿನಗಳಿಂದ ಜನ ಕಾಯುತ್ತಿದ್ದಾರೆ.- ಪವನ್ ಶಿಮಂತೂರು, ಸಾಧು ಅಂಚನ್ ಮಟ್ಟು, ಕೃಷಿಕರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net