ಕ್ರೆಡಿಟ್ ಸೊಸೈಟಿ ಬೆವರಿಳಿಸಿದ ಗ್ರಾಹಕರ ಆಯೋಗ!

images.jpg
Published on

 ಬೆಳಗಾವಿ: ಸಹಕಾರ ಕ್ರೆಡಿಟ್ ಸೊಸೈಟಿಯೊಂದು ಸಾಲ, ಸಾಲದ ಬಡ್ಡಿ ಮೊತ್ತದ ಜತೆ ಹೆಚ್ಚುವರಿಯಾಗಿ ರೈತನಿಂದ ಪಡೆದಿದ್ದ 38.18 ಲಕ್ಷ ರೂ. ವನ್ನು ಮರಳಿ ಬಡ್ಡಿ ಸಮೇತ ಹಿಂದಿರುಗಿಸುವಂತೆ ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.
 ಬೆಳಗಾವಿಯ ಭೀಮಪ್ಪ ಹನುಮಂತಪ್ಪ ರಾಡಿ ಅವರು ಕೃಷಿ ಭೂಮಿಯ ಅಭಿವೃದ್ಧಿಗೆ ‘ಶ್ರೀಮಾತಾ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ’ಯಿಂದ ಸ್ವತ್ತಿನ ಅಡಮಾನ ಪತ್ರದ ಮೂಲಕ 3 ಕೋಟಿ ರೂ. ಸಾಲ ಪಡೆದಿದ್ದರು. ಸಾಲದ ಮೊತ್ತವನ್ನು ಬಡ್ಡಿ ಸಮೇತ ಹಿಂತಿರುಗಿಸುವಾಗ ಸೊಸೈಟಿಯು 38.18 ಲಕ್ಷ ರೂ. ಹೆಚ್ಚುವರಿಯಾಗಿ ಪಡೆದಿತ್ತು. ಗ್ರಾಹಕರಿಂದ ಹೆಚ್ಚುವರಿ ಹಣ ಪಡೆಯುವುದು ಸಾಲದ ಒಪ್ಪಂದ ಪತ್ರದ ಪ್ರಕಾರ ಮತ್ತು ಬ್ಯಾಂಕಿಂಗ್ ಕಾನೂನು ಸಿದ್ಧಾಂತಕ್ಕೆ ವ್ಯತಿರಿಕ್ತವಾಗಿರುತ್ತದೆ. ಇದು ಹಣಕಾಸಿನ ಸಂಸ್ಥೆಯ ಸೇವೆಯಲ್ಲಿ ಕೊರತೆಯಾಗಿರುತ್ತದೆ ಮತ್ತು ಅನ್ಯಾಯದ ವ್ಯಾಪಾರವಾಗಿರುತ್ತದೆ ಎಂಬ ವಾದವನ್ನು ಪರಿಗಣಿಸಿದ ಆಯೋಗ, ಹೆಚ್ಚುವರಿಯಾಗಿ ಪಡೆದ ಹಣವನ್ನು ಬಡ್ಡಿ ಸಮೇತ ಗ್ರಾಹಕರಿಗೆ ಹಿಂತಿರುಗಿಸುವಂತೆ ಆದೇಶಿಸಿದೆ. ಗ್ರಾಹಕರ ಪರವಾಗಿ ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯವಾದಿ ಪ್ರಶಾಂತ್ ಟಿ ಪಂಡಿತ್ ವಾದಿಸಿದ್ದರು. ನ್ಯಾಯಾಂಗ ಸದಸ್ಯರಾದ ರವಿಶಂಕರ್ ಮತ್ತು ಶ್ರೀಮತಿ ಸುನೀತ ಬೆಗವಾಡಿ ಅವರು ತೀರ್ಪು ನೀಡಿದ್ದಾರೆ.
 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net