ವೆಜ್ ಕೇಳಿದ್ದ ಪ್ರಯಾಣಿಕನಿಗೆ ನಾನ್​ವೆಜ್ ಕೊಟ್ಟ ವಿಮಾನ ಸಿಬ್ಬಂದಿ: ಫ್ಲೈ ಎಮಿರೇಟ್ಸ್ ಗೆ ದಂಡ

FLY Emirates 3 MAR 20
Published on

ಬೆಂಗಳೂರು: ವಿಮಾನದಲ್ಲಿ ಸಸ್ಯಾಹಾರಿ ಪ್ರಯಾಣಿಕರಿಗೆ ಮಾಂಸಾಹಾರ ಪೂರೈಕೆ ಮಾಡಿದ ಫ್ಲೈ ಎಮಿರೇಟ್ಸ್ ಸಂಸ್ಥೆಗೆ 20 ಸಾವಿರ ರೂ. ದಂಡ ವಿಧಿಸಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.

ಬೆಂಗಳೂರಿನಿಂದ ಲಂಡನ್​ಗೆ ವಿಮಾನ ಟಿಕೆಟ್ ಕಾಯ್ದಿರಿಸುವ ಸಂದರ್ಭದಲ್ಲಿ ಸಸ್ಯಾಹಾರ ಒದಗಿಸುವಂತೆ ಮನವಿ ಮಾಡಿದ್ದರೂ ಮಾಂಸಾಹಾರ ಪೂರೈಕೆ ಮಾಡಲಾಗಿದೆ. ಅರಿಯದೆ ಅದನ್ನು ಸೇವಿಸಿರುವುದರಿಂದ ತಮ್ಮ ಧಾರ್ವಿುಕ ಭಾವನೆಗಳಿಗೆ ಹಾನಿಯಾಗಿದೆ ಎಂದು ಆರೋಪಿಸಿ ನಗರದ ದಂಪತಿ ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿದ್ದರು. ದೂರಿನ ವಿಚಾರಣೆ ನಡೆಸಿದ ನ್ಯಾಯಾಲಯ, ಸಸ್ಯಾಹಾರಿ ಪ್ರಯಾಣಿಕರಿಗೆ ಮಾಂಸಾಹಾರ ಪೂರೈಕೆ ಮಾಡಿರುವ ವಿಮಾನಯಾನ ಸಂಸ್ಥೆ ಸೇವಾ ನ್ಯೂನತೆ ಎಸಗಿರುವುದಷ್ಟೇ ಅಲ್ಲದೆ, ದೂರುದಾರರ ಭಾವನೆಗಳಿಗೂ ಧಕ್ಕೆಯುಂಟು ಮಾಡಿದೆ ಎಂದು ಹೇಳಿದೆ.

ಒಬ್ಬ ವ್ಯಕ್ತಿಯ ಭಾವನೆಯನ್ನು ಹಣದಿಂದ ಅಳೆಯಲು ಸಾಧ್ಯವಿಲ್ಲ. ಆದರೆ, ಮಾಂಸಾಹಾರ ಸೇವನೆ ಮಾಡಿರುವುದನ್ನು ಸಾಬೀತು ಪಡಿಸುವ ಸೂಕ್ತ ದಾಖಲೆಗಳನ್ನು ದೂರುದಾರರು ಒದಗಿಸಿಲ್ಲ. ಹೀಗಿದ್ದರೂ, ಪ್ರಯಾಣಿಕರ ಆಹಾರದ ವಿಚಾರದಲ್ಲಿ ಸೂಕ್ತ ಕಾಳಜಿ ವಹಿಸದೆ ನಿರ್ಲಕ್ಷ್ಯ ವಹಿಸಿರುವ ಸಂಸ್ಥೆ, ದೂರುದಾರರಿಗೆ 15 ಸಾವಿರ ರೂ. ಪರಿಹಾರದ ಜತೆಗೆ ವ್ಯಾಜ್ಯದ ವೆಚ್ಚ 5 ಸಾವಿರ ರೂ.ಗಳನ್ನೂ ಪಾವತಿಸಬೇಕು ಎಂದು ಸೂಚಿಸಿದೆ. ದಂಪತಿ ಪರ ವಕೀಲ ಕೆ.ಎನ್. ಫಣೀಂದ್ರ ವಾದ ಮಂಡಿಸಿದ್ದರು.

ಸಾತ್ವಿಕ ಜೀವನಶೈಲಿಗೆ ಧಕ್ಕೆ: ಸಿಬ್ಬಂದಿ ನಿರ್ಲಕ್ಷ್ಯದಿಂದ ವಿಮಾನ ಪ್ರಯಾಣದುದ್ದಕ್ಕೂ ಮಾನಸಿಕ ಕಿರಿಕಿರಿ ಅನುಭವಿಸುವಂತಾಗಿತ್ತು. ಅಪ್ಪಟ ಸಸ್ಯಾಹಾರಿಯಾಗಿರುವ ನಾವು ಮೊದಲಿನಿಂದಲೂ ಸಾತ್ವಿಕ ಜೀವನಶೈಲಿ ಅನುಸರಿಸಿಕೊಂಡು ಬಂದಿದ್ದೇವೆ. ಆದರೆ, ಸಿಬ್ಬಂದಿ ಮಾಡಿದ ತಪ್ಪಿನಿಂದ ಹಿಂದಿನಿಂದಲೂ ಅಳವಡಿಸಿಕೊಂಡಿದ್ದ ಪದ್ಧತಿ ಮುರಿದು ಬಿದ್ದಿದೆ. ಮಾಂಸಾಹಾರ ಸೇವನೆ ಮಾಡಿರುವ ಕಾರಣ ಮೊದಲಿನಂತೆ ಪೂಜೆ, ಪ್ರಾರ್ಥನೆ ಇನ್ನಿತರ ಧಾರ್ವಿುಕ ಆಚರಣೆಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ದೇವರಿಗೆ ದ್ರೋಹ ಮಾಡಿರುವ ಪಾಪಪ್ರಜ್ಞೆ ಕಾಡುತ್ತಿದ್ದು, ಮಾನಸಿಕ ಆಘಾತ ಹಾಗೂ ಖಿನ್ನತೆಗೆ ಒಳಗಾಗಿದ್ದೇವೆ ಎಂದು ದಂಪತಿ ತಮ್ಮ ದೂರಿನಲ್ಲಿ ಅಳಲು ತೋಡಿಕೊಂಡಿದ್ದರು.

ಏನಿದು ಪ್ರಕರಣ?: ಬೆಂಗಳೂರು ಮೂಲದ ದಂಪತಿ ಉದ್ಯೋಗ ನಿಮಿತ್ತ ಲಂಡನ್​ನಲ್ಲಿ ನೆಲೆಸಿದ್ದರು. ಭಾರತಕ್ಕೆ ಬರಲು ತೀರ್ವನಿಸಿದ್ದ ಅವರು, ಬಿಜಿನೆಸ್ ಕ್ಲಾಸ್ ಟಿಕೆಟ್ ಕಾಯ್ದಿರಿಸಿದ್ದರು. ಟಿಕೆಟ್ ಕಾಯ್ದಿರಿಸುವ ಸಂದರ್ಭದಲ್ಲಿ ತಮಗೆ ಏಷ್ಯನ್ ವೆಜಿಟೇರಿಯನ್ ಮೀಲ್ (ಎವಿಎಂಎಲ್) ಪೂರೈಸುವಂತೆ ಮನವಿ ಮಾಡಿದ್ದರು. ಜುಲೈನಲ್ಲಿ ಬೆಂಗಳೂರಿಗೆ ಬಂದಿದ್ದ ದಂಪತಿ, ಆಗಸ್ಟ್​ನಲ್ಲಿ ಲಂಡನ್​ಗೆ ಹಿಂದಿರುಗಲು ವಿಮಾನವೇರಿದ್ದರು. ವಿಮಾನ ಹೊರಟ ಕೆಲ ಸಮಯದಲ್ಲಿ ಪ್ರಯಾಣಿಕರಿಗೆ ಆಹಾರ ಪೂರೈಕೆ ಮಾಡಲಾಗಿತ್ತು. ಈ ವೇಳೆ, ತಮಗೆ ಸಸ್ಯಾಹಾರ ಪೂರೈಕೆ ಮಾಡಲಾಗಿದೆಯೇ ಎಂದು ಸಿಬ್ಬಂದಿ ಬಳಿ ಕೇಳಿ ಖಚಿತಪಡಿಸಿಕೊಂಡಿದ್ದ ಮಹಿಳೆ, ಆಹಾರ ಸೇವಿಸಲು ಆರಂಭಿಸಿದ್ದರು. ಕೆಲ ನಿಮಿಷದ ಬಳಿಕ ಪತಿಗೆ ಆಹಾರ ನೀಡಲಾಗಿತ್ತು. ಪತಿಯ ಆಹಾರ ತಮಗಿಂತ ವಿಭಿನ್ನವಾಗಿರುವುದನ್ನು ಗಮನಿಸಿದ್ದ ಮಹಿಳೆ ಮತ್ತೊಮ್ಮೆ ಸಿಬ್ಬಂದಿ ಕರೆದು ಕೇಳಿದ್ದರು. ಆಗಲೂ ಸಹ ಸಸ್ಯಾಹಾರವನ್ನೇ ಪೂರೈಕೆ ಮಾಡಿರುವುದಾಗಿ ಸಿಬ್ಬಂದಿ ಖಚಿತಪಡಿಸಿದ್ದರು. ಆದರೆ, ತಮ್ಮ ಹಾಗೂ ತಮ್ಮ ಪತಿಯ ಟ್ರೇಗಳು ಬೇರೆ ಬೇರೆ ಇರುವ ಬಗ್ಗೆ ಪ್ರಶ್ನಿಸಿದಾಗ, ಮಹಿಳೆಗೆ ಮಾಂಸಾಹಾರ

ಪೂರೈಕೆ ಮಾಡಿರುವುದು ಸಿಬ್ಬಂದಿ ಗಮನಕ್ಕೆ ಬಂದಿತ್ತು. ತಕ್ಷಣ ಕ್ಷಮೆಯಾಚಿಸಿದ ಸಿಬ್ಬಂದಿ, ಮಾಂಸಾಹಾರ ಹಿಂಪಡೆದು ಸಸ್ಯಾಹಾರ ನೀಡಿದ್ದರು. ಆದರೆ, ಆ ಹೊತ್ತಿಗಾಗಲೇ ಮಹಿಳೆ ಆಹಾರ ಸೇವಿಸಿದ್ದರು. ವಿಮಾನ ಇಳಿದ ಬಳಿಕ ಸಂಸ್ಥೆಗೆ ದೂರು ನೀಡಿದ್ದರಾದರೂ ದೂರು ಸ್ವೀಕರಿಸಿದ್ದ ಸಂಸ್ಥೆ, ಕೇವಲ ಕ್ಷಮೆಯಾಚಿಸಿ, ಸಿಬ್ಬಂದಿ ವಿರುದ್ಧ ಆಂತರಿಕ ವಿಚಾರಣೆ ನಡೆಸುವುದಾಗಿ ತಿಳಿಸಿತ್ತು.

ಆರೋಪ ಅಲ್ಲಗಳೆದ ಸಂಸ್ಥೆ: ದೂರುದಾರರಿಗೆ ತಪ್ಪಾಗಿ ಮಾಂಸಾಹಾರ ಪೂರೈಕೆ ಮಾಡಲಾಗಿದೆ. ಸಸ್ಯಾಹಾರಿಗಳಾಗಿರುವ ಅವರು ಅದನ್ನು ಗಮನಿಸಿ ತಿನ್ನುವುದನ್ನು ತಪ್ಪಿಸಬಹುದಿತ್ತು. ತಿನ್ನುವ ಮೊದಲೇ ಸಿಬ್ಬಂದಿ ಗಮನಕ್ಕೆ ತಂದು, ಪರ್ಯಾಯ ವ್ಯವಸ್ಥೆಗೆ ಮನವಿ ಮಾಡಬಹುದಿತ್ತು. ಆ ಕೆಲಸ ಮಾಡದೆ ಮಾಂಸಾಹಾರ ಸೇವನೆ ಮಾಡಿದ್ದಾರೆಂದರೆ ಅದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಸಂಸ್ಥೆ ತಿಳಿಸಿತ್ತು.

ಜಗನ್ ರಮೇಶ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net