ಅನ್ನದಾತರ ಶಾಪ ತಟ್ಟದೆ ಬಿಡಲ್ಲ: ಕೆ.ಎಸ್.ಈಶ್ವರಪ್ಪ

bjp protest
ರಾಜ್ಯ ಸರ್ಕಾರದ ವಿರುದ್ಧದ ಬಿಜೆಪಿ ಪ್ರತಿಭಟನೆಯಲ್ಲಿ ಕೆ.ಎಸ್.ಈಶ್ವರಪ್ಪ ಮಾತನಾಡಿದರು. ಬಿ.ವೈ.ರಾಘವೇಂದ್ರ, ಎಸ್.ಎನ್.ಚನ್ನಬಸಪ್ಪ, ಎಸ್.ರುದ್ರೇಗೌಡ, ಟಿ.ಡಿ.ಮೇಘರಾಜ್ ಮುಂತಾದವರಿದ್ದರು.
Published on

ಶಿವಮೊಗ್ಗ: ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ್ ಜತೆಗೆ ಸಿಎಂ ಆಗಿದ್ದ ಬಿ.ಎಸ್.ಯಡಿಯೂರಪ್ಪ ವರ್ಷಕ್ಕೆ ನಾಲ್ಕು ಸಾವಿರ ರೂ. ರೈತರಿಗೆ ನೀಡಿದರು. ಆದರೆ ಈ ರಾಜ್ಯ ಸರ್ಕಾರ ನಾಲ್ಕು ಸಾವಿರ ರೂ.ಗೆ ಬ್ರೇಕ್ ಹಾಕಿದೆ. ಆದರೂ ನಮ್ಮದು ರೈತಪರ ಸರ್ಕಾರ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಸರ್ಕಾರ ಇದೇ ರೀತಿ ರೈತ ವಿರೋಧಿ ನೀತಿ ಮುಂದುವರಿಸಿದರೆ ಬಿಎಸ್‌ವೈ ನೇತೃತ್ವದಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಎಚ್ಚರಿಸಿದರು.

ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಬಿಜೆಪಿ ರೈತ ಮೋರ್ಚಾ ಜಿಲ್ಲಾ ಘಟಕದಿಂದ ಡಿಸಿ ಕಚೇರಿ ಎದುರು ಮಂಗಳವಾರ ಏರ್ಪಡಿಸಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುವ ತಂತ್ರವನ್ನು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅನುಸರಿಸುತ್ತಿದ್ದಾರೆ. ಆದರೆ ರೈತರ ಶಾಪ ಈ ಸರ್ಕಾರಕ್ಕೆ ತಟ್ಟದೆ ಬಿಡದು ಎಂದು ಹರಿಹಾಯ್ದರು.
ಬರದಿಂದ ಎಷ್ಟು ನಷ್ಟವಾಗಿದೆ ಎಂಬ ಸಮೀಕ್ಷೆಯನ್ನೇ ನಡೆಸದ ರಾಜ್ಯ ಸರ್ಕಾರ ಈಗ ಕೇಂದ್ರ ಸರ್ಕಾರದ ವಿರುದ್ಧ ವೃಥಾ ಆರೋಪ ಮಾಡುತ್ತಿದೆ. ಮೊದಲು ಸಮೀಕ್ಷೆ ನಡೆಸಿ ಬಳಿಕ ಕೇಂದ್ರದಿಂದ ಪರಿಹಾರ ಕೇಳಲಿ ಎಂದು ಹೇಳಿದರು.
ಉಚಿತ ಬಸ್ ಪ್ರಯಾಣದಿಂದ ಮಹಿಳೆಯರು ಖುಷಿಯಾಗಿದ್ದಾರೆ. ಆದರೆ ಟ್ಯಾಕ್ಸಿ, ಆಟೋ ಚಾಲಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಇವರ ಬೇಡಿಕೆಯನ್ನು ಈಡೇರಿಸಲು ಸಾಧ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಇಂತಹ ಸರ್ಕಾರದಿಂದ ಜನರು ಏನು ನಿರೀಕ್ಷೆ ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.
ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಸಾಲೆಕೊಪ್ಪ ರಾಮಚಂದ್ರ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರಾದ ಭಾರತಿ ಶೆಟ್ಟಿ, ಎಸ್.ರುದ್ರೇಗೌಡ, ಮಾಜಿ ಶಾಸಕ ಕೆ.ಬಿ.ಅಶೋಕ ನಾಯ್ಕ ಮುಂತಾದವರು ಪ್ರತಿಭಟನೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net