ಅಡಕೆಗೆ ಕೊಳೆ ರೋಗದ ಕರಿ ನೆರಳು

26Koppa01
ಕೊಪ್ಪದ ಹರಿಹರಪುರ ಹೋಬಳಿಯ ನಿಲುವಾಗಿಲಿನಲ್ಲಿ ಗಾಳಿ, ಮಳೆಗೆ ಅಡಕೆ ಉದುರಿರುವುದು.
Published on

ಕೊಪ್ಪ:ಕಳೆದ 15 ದಿನಗಳಿಂದ ತಾಲೂಕಿನಲ್ಲಿ ಎಡಬಿಡದೇ ಸುರಿಯುತ್ತಿರುವ ಮಳೆಯಿಂದ ತಾಲೂಕಿನಲ್ಲಿ ಅಡಕೆ,ಕಾಫಿಗೆ ಕೊಳೆ ರೋಗ ಭೀತಿ ಎದುರಾಗಿದ್ದು, ರೈತರು ಆತಂಕದಲ್ಲಿದ್ದಾರೆ.
ಕೊಪ್ಪ ತಾಲೂಕಿನ ಮೇಗುಂದ ಹೋಬಳಿಯಲ್ಲಿ 3,507 ಹೆಕ್ಟೇರ್, ಕಸಬಾ ಹೋಬಳಿಯಲ್ಲಿ 3,214 ಹೆಕ್ಟೇರ್, ಹರಿಹರಪುರ ಹೋಬಳಿಯಲ್ಲಿ 2,636.56 ಹೆಕ್ಟೇರ್ ಸೇರಿ ತಾಲೂಕಿನಲ್ಲಿ ಒಟ್ಟು 9,357.56 ಹೆಕ್ಟೇರ್ ಪ್ರದೇಶದಲ್ಲಿ ಅಡಕೆ ಬೆಳೆಯಲಾಗುತ್ತದೆ.
ತಾಲೂಕಿನ ಕಸಬಾ, ಹರಿಹರಪುರ ಹಾಗೂ ಮೇಗುಂದ ಹೋಬಳಿ ಭಾಗದ ರೈತರು ಪ್ರಮುಖವಾಗಿ ಅಡಕೆ ಬೆಳೆಯನ್ನು ನಂಬಿಕೊಂಡಿದ್ದಾರೆ. ಆದರೆ ಪ್ರತಿ ವರ್ಷ ಪ್ರಕೃತಿ ವೈಪರಿತ್ಯದಿಂದ ಅಡಕೆಯಲ್ಲಿ ಇಳುವರಿ ಕಡಿಮೆಯಾಗುತ್ತಿರುವುದು ಬೆಳೆಗಾರರ ಚಿಂತೆಯನ್ನು ಹೆಚ್ಚಿಸಿದೆ. ಮಳೆ ಹೆಚ್ಚದಾರೂ ಕಡಿಮೆಯಾದರೂ ಅಡಕೆ ಇಳುವರಿ ಮೇಲೆ ಪರಿಣಾಮ ಬೀರುತ್ತಿದೆ.
ಕಳೆದ ವರ್ಷ ಮಳೆ ಕಡಿಮೆಯಾಗಿ ಹಾಗೂ ಬಿಸಿಲು ಹೆಚ್ಚಾಗಿತ್ತು. ನಂತರ ಬಿಸಿಲು ಮತ್ತು ಮಳೆ ಒಟ್ಟಿಗೆಯಾಗಿದ್ದರಿಂದ ಅಡಕೆಯಲ್ಲಿ ಎಲೆಚುಕ್ಕಿ ರೋಗ ಕಾಣಿಸಿಕೊಂಡು ಕೆಲವು ಅಡಕೆ ತೋಟಗಳು ನಾಶವಾಗಿತ್ತು. ಇನ್ನು ಹಲವೆಡೆ ಅಡಕೆ ಇಳುವರಿ ಕಡಿಮೆಯಾಗಿತ್ತು. ವರ್ಷಗಟ್ಟಲೇ ಕಷ್ಟಪಟ್ಟು ಬೆಳೆಸಿದ್ದ ಅಡಕೆ ತೋಟ ಎರಡು ತಿಂಗಳಲ್ಲೇ ಹಾಳಾಗಿತ್ತು. ಪ್ರಸಕ್ತ ವರ್ಷ ಈವರೆಗೆ ಕೊಪ್ಪ ಪಟ್ಟಣದಲ್ಲಿ 80, ಅತ್ತಿಕೊಡಿಗೆ, ಕಮ್ಮರಡಿ ಭಾಗದಲ್ಲಿ ಸುಮಾರು 100 ಇಂಚು ಮಳೆಯಾಗಿದೆ. ಇನ್ನೂ ಒಂದುವರೆ ತಿಂಗಳು ಮಳೆ ಇರುವುದರಿಂದ ಕನಿಷ್ಠ 30 ಗರಿಷ್ಠ 60 ಇಂಚು ಮಳೆಯಾಗುವಾಗುವ ಸಾಧ್ಯತೆ ಇದೆ. ಇದರಿಂದ ಅಡಕೆಗೆ ಹಾನಿ ತಪ್ಪಿದಲ್ಲ. ಅಧಿಕ ಮಳೆಯಾಗಿರುವುದರಿಂದ ಈ ಬಾರಿಯೂ ಇಳುವರಿ ಕಡಿಮೆಯಾಗುವ ಸಾಧ್ಯತೆ ಹೆಚ್ಚಿದೆ.
ಗಾಳಿ ಸಹಿತ ಮಳೆಯಾದ ಪರಿಣಾಮ ಸಾವಿರಾರು ಅಡಕೆ ಮರಗಳು ನೆಲಕಚ್ಚಿವೆ. ಮರದಿಂದ ಹಸಿ ಅಡಕೆ ಹಾಗೂ ಅಡಕೆ ಗೊನೆಗಳು ನೆಲಕ್ಕೆ ಉರುಳಿದೆ. ಇದರಿಂದ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ಹಲವೆಡೆ ತೋಟಕ್ಕೆ ಕೊಳೆ ರೋಗ ಬಂದಿದ್ದು ರೈತರು ಸಂಕಷ್ಟ ಸಿಲುಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net