ಲಂಚಬಾಕ ಪಾತಪಾಳ್ಯ ಪಿಎಸ್‌ಐ : ಹಣ ಕೊಟ್ರೆ ಕೆಲ್ಸ, ಇಲ್ಲದಿದ್ರೆ ಕೇಸ್ !

PSI Ranthayya
Published on

ಬಾಗೇಪಲ್ಲಿ: ಪಾಸ್ ಪೋರ್ಟ್ ಪರಿಶೀಲನೆ, ವಾಹನ ಬಿಡುಗಡೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಲಂಚಕ್ಕಾಗಿ ಜಿಲ್ಲೆಯ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಪೀಡಿಸಿದ್ದಾರೆ ಎನ್ನಲಾದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಂಬಂಧಪಟ್ಟ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸಂತ್ರಸ್ಥರು ಮನವಿ ಮಾಡಿದ್ದಾರೆ.

ಪಾತಪಾಳ್ಯ ಠಾಣೆಯ ಸಬ್ ಇನ್‌ಸ್ಪೆಕ್ಟರ್ ರತ್ನಯ್ಯ ವಿರುದ್ಧ ಆರೋಪ ಕೇಳಿಬಂದಿದ್ದು, ನಾಲ್ಕೈದು ಕಡೆ ಲಂಚಕ್ಕೆ ಪೀಡಿಸಿದ ಸಂದರ್ಭದಲ್ಲಿ ಸಂತ್ರಸ್ತರು ಆಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಅವಾಜ್ ಹಾಕುವ, ಕಡಿಮೆ ಹಣಕ್ಕೆ ಕಿಡಿಕಾರಿರುವ, ನಾಗರಿಕರಿಗೆ ಕಿರುಕುಳ ನೀಡಿರುವುದು ಆಡಿಯೋದಲ್ಲಿವೆ.

ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳಲು ಅಗತ್ಯವಿರುವ ಪಾಸ್‌ಪೋರ್ಟ್ ದಾಖಲೆ ಪರಿಶೀಲನೆ ಸಂದರ್ಭದಲ್ಲಿ ವಿದೇಶದಲ್ಲಿ ಲಕ್ಷ ಲಕ್ಷ ದುಡಿತೀರಾ, ನಿಮ್ಮ ಕೆಲಸ ಮಾಡಿಕೊಡುವ ನಮಗೆ ಲಂಚ ಕೊಡೋಕೇನು? ಎಂದಿರುವ ಆಡಿಯೋ ಚರ್ಚೆಗೆ ಗ್ರಾಸವಾಗಿದೆ.

ವಿವಿಧ ಪ್ರಕರಣಗಳಲ್ಲಿ ಮುಟ್ಟುಗೋಲು ಹಾಕಿಕೊಂಡಿರುವ ಮೂರು ದ್ವಿಚಕ್ರ ವಾಹನಗಳನ್ನು ಬಿಡುಗಡೆ ಮಾಡುವಂತೆ ಬಾಗೇಪಲ್ಲಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರ ಆದೇಶಕ್ಕೂ ಕಿಮ್ಮತ್ತು ನೀಡಿಲ್ಲ. ಒಂದೊಂದು ವಾಹನಕ್ಕೆ ಮೂರು ಸಾವಿರ ರೂ. ಕೊಟ್ಟರೆ ಮಾತ್ರ ಬಿಡ್ತೇನೆ, ಇಲ್ಲಾ ಅಂದ್ರೆ ಇಲ್ಲ!, ವಕೀಲರ ಕಡೆಯಿಂದ ಒತ್ತಡ ಹಾಕಿಸಿದರೆ ವಾಹನ ಮಾಲೀಕರ ವಿರುದ್ಧ ಮತ್ತೊಂದು ಕ್ರಿಮಿನಲ್ ಕೇಸ್ ಹಾಕಿ ಜೈಲಿಗೆ ಕಳುಹಿಸ್ತೇನೆ ಎಂದು ಬೆದರಿಸಿದ ಆಡಿಯೋ ಸಹ ಬೆಳಕಿಗೆ ಬಂದಿದ್ದು, ಮಾಲೀಕರು ವಿಧಿಯಿಲ್ಲದೆ ಹಣ ಕೊಟ್ಟು ವಾಹನ ಪಡೆದಿದ್ದಾರೆ.

ಜೀಪ್ ರಿಪೇರಿಗೆ ಜನ ಹಣ ಕೊಡ್ಬೇಕಂತೆ: ಇದರ ಜತೆಗೆ ಪಾತಪಾಳ್ಯ ಠಾಣೆಯ ಜೀಪ್ ರಿಪೇರಿಗೆ 10 ಸಾವಿರ ರೂ. ನೀಡುವಂತೆ ಸ್ಥಳೀಯರಿಗೆ ಒತ್ತಡ ಹಾಕಿರುವ ಮತ್ತೊಂದು ಆಡಿಯೋ ವೈರಲ್ ಆಗಿದೆ. ಇಷ್ಟೇ ಅಲ್ಲದೆ ಹಣ ನೀಡದಿದ್ದರೆ ಯಾವುದಾದರೊಂದು ಪ್ರಕರಣದಲ್ಲಿ ಸಿಲುಕಿಸಿ ಠಾಣೆಗೆ ಕರೆಸಿಕೊಂಡು ಬೆದರಿಸಿ ಹಣ ವಸೂಲಿ ಮಾಡಿರುವ ಆರೋಪಗಳು ಕೇಳಿಬಂದಿವೆ.

ಭರವಸೆಯಲ್ಲಿ ಕ್ರಮ ಪೂರ್ಣ: ಜನರ ವ್ಯಾಪಕ ದೂರು ಮತ್ತು ಆಡಿಯೋಗಳು ಹೊರಗೆ ಬಂದ ಹಿನ್ನೆಲೆಯಲ್ಲಿ ಆಗಸ್ಟ್ 30 ರಂದು ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಬೆಂಬಲಿಗರೊಂದಿಗೆ ಠಾಣೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿತ್ತು. ವೃತ್ತ ನಿರೀಕ್ಷಕ ಜಿ.ಪಿ.ರಾಜು ಸೂಕ್ತ ಕ್ರಮದ ಭರವಸೆ ನೀಡಿ ಸಮಾಧಾನಪಡಿಸಿದ್ದರಾದರೂ ಯಾವುದೇ ಕ್ರಮ ಕೈಗೊಂಡಿಲ್ಲ.

ಕಾನೂನು ವ್ಯವಸ್ಥೆಗೆ ಗೌರವ ಸಲ್ಲಿಸಬೇಕಾಗಿರುವ ಪೊಲೀಸರೇ ನ್ಯಾಯಾಲಯದ ಆದೇಶಕ್ಕೆ ಬೆಲೆ ನೀಡದೆ ಹಣ ವಸೂಲಿಗೆ ಪೀಡಿಸಿರುವುದು ಶೋಚನೀಯ ಸಂಗತಿ. ನಾಗಭೂಷಣ, ವಕೀಲ, ಬಾಗೇಪಲ್ಲಿ ಪಾತಪಾಳ್ಯ ಠಾಣೆಯ ಸಬ್ ಇನ್‌ಸ್ಪೆಕ್ಟರ್ ರತ್ನಯ್ಯ ಲಂಚಕ್ಕೆ ಪೀಡಿಸಿರುವ ಆಡಿಯೋ ವೈರಲ್ ಆಗಿರುವುದು ಗಮನಕ್ಕೆ ಬಂದಿದೆ. ಇದರ ಬಗ್ಗೆ ವರದಿ ತರಿಸಿಕೊಳ್ಳಲಾಗಿದೆ. ಇಲಾಖೆಯ ನಿಯಮಾನುಸಾರ ಅಮಾನತು ಮಾಡಲಾಗುವುದು. ಜಿ.ಕೆ.ಮಿಥುನ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಚಿಕ್ಕಬಳ್ಳಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net