

ಮಂಡ್ಯ: ಮಂಡ್ಯ ವಿಶ್ವವಿದ್ಯಾನಿಲಯದಲ್ಲಿ ಈವರೆಗೆ ಮೈಸೂರು ವಿವಿಯ ಪಠ್ಯಕ್ರಮ ಅಳವಡಿಸಿಕೊಂಡಿತ್ತು. ವಿದ್ಯಾರ್ಥಿಗಳು ಹಾಗೂ ಶಿಕ್ಷಣ ತಜ್ಞರ ಅಭಿಪ್ರಾಯ ಪಡೆದು ಪ್ರತ್ಯೇಕ ಪಠ್ಯಕ್ರಮ ಅಳವಡಿಸಿಕೊಳ್ಳಲು ಕ್ರಮ ವಹಿಸಲಾಗುತ್ತಿದೆ. ಇದಕ್ಕಾಗಿ ವಿಷಯ ತಜ್ಞರ ಸಮಿತಿ ರಚಿಸಿದ್ದು, ಈಗಾಗಲೇ ಹಲವು ಸುತ್ತಿನ ಕಾರ್ಯಾಗಾರ ನಡೆಸಿ ಮುಂದಿನ ತಿಂಗಳಲ್ಲಿ ವರದಿ ನೀಡಲಿದೆ ಎಂದು ಮಂಡ್ಯ ವಿವಿಯ ಪ್ರಭಾರ ಕುಲಸಚಿವ ಮತ್ತು ಶಿಕ್ಷಣ ಅಧ್ಯಯನ ಮಂಡಳಿ ಅಧ್ಯಕ್ಷ ಡಾ.ಎಸ್.ಎಲ್.ಸುರೇಶ್ ಹೇಳಿದರು.
ನಗರದ ಸ್ವರ್ಣಸಂದ್ರದಲ್ಲಿರುವ ಎ.ಇ.ಟಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ.ಇಡಿ ಪ್ರಥಮ ಮತ್ತು ತೃತೀಯ ಸೆಮಿಸ್ಟರ್ ಪಠ್ಯವಸ್ತು ಪರಿಷ್ಕರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಹಿತದೃಷ್ಟಿ ಹಾಗೂ ಸುಗಮವಾದ ಅಧ್ಯಯನ ಮತ್ತು ಅವರ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಪೂರಕವಾದ ಸಹಾಯಕವಾಗುವಂತಹ ಪಠ್ಯವಿಷಯ ಇದ್ದಾಗ ಮಾತ್ರ ಸ್ಪೂರ್ತಿದಾಯಕ, ಚೈತನ್ಯಶೀಲ, ಕ್ರಿಯಾಶೀಲ, ಚಟುವಟಿಕೆಭರಿತರಾಗಿ ಕಲಿಯಲು ಸಾಧ್ಯ ಎಂದರು.
ಕಾರ್ಯಾಗಾರ ಉದ್ಘಾಟಿಸಿ ಎ.ಇ.ಟಿ ಶಿಕ್ಷಣ ಮಹಾವಿದ್ಯಾಲಯ ಅಧ್ಯಕ್ಷೆ ಶಾರದಾ ರಮೇಶ್‌ರಾಜು ಮಾತನಾಡಿ, ಕೃಷಿ ಪ್ರಧಾನ ಮಂಡ್ಯದಲ್ಲಿ ಕೃಷಿ ವಿಶ್ವವಿದ್ಯಾಲಯ ಪ್ರಾರಂಭವಾಗುತ್ತಿರುವುದು ಸಂತಸದ ವಿಷಯ. ಜಿಲ್ಲೆಯ ರೈತರ ಮಕ್ಕಳ ಉನ್ನತ ಶಿಕ್ಷಣವನ್ನು ಪಡೆಯಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಎ.ಇ.ಟಿ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಡಾ.ಎಸ್.ಶಿವಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಂಡ್ಯ ವಿವಿ ಶಿಕ್ಷಣ ಅಧ್ಯಯನ ಮಂಡಳಿ ಸದಸ್ಯರಾದ ಡಾ.ವಿ.ಡಿ.ಸುವರ್ಣ, ಡಾ.ಕೆ.ಚನ್ನಕೃಷ್ಣಯ್ಯ, ಡಾ.ಎಸ್.ಜಯಶಂಕರ್, ಡಾ.ಬಿ.ಸಿ.ಹೇಮಂತ್‌ಕುಮಾರ್, ಡಾ.ವಿ.ಕುಮಾರ್, ವಿಷಯ ತಜ್ಞರಾದ ಎಚ್.ಪಿ.ಧರ್ಮೇಶ್, ವರುಣ್, ಡಾ.ಮೇರಿ ಡಿಸೋಜಾ, ಗಂಗೇಗೌಡ, ಮೋಹನ್‌ದಾಸ್, ಸುಕೇಶ್, ಕಿರಣ್, ಪ್ರದೀಪ್ ಇತರರಿದ್ದರು.