

ಮೈಸೂರು: ವಿದ್ಯಾರ್ಥಿಗಳು ಜೀವನದಲ್ಲಿ ನಕಾರಾತ್ಮಕ ಚಿಂತನೆಗಳನ್ನು ಬದಿಗೊತ್ತಿ ಉತ್ತಮ ಜೀವನ ರೂಪಿಸಿಕೊಳ್ಳುವ ಕಡೆಗೆ ಗಮನ ಹರಿಸಬೇಕು ಎಮದು ಜೆಎಸ್‌ಎಸ್ ವೈದ್ಯಕೀಯ ಕಾಲೇಜಿನ ಡಾ.ಕೆ.ಸಿ.ಶಶಿಧರ ಕಿವಿಮಾತು ಹೇಳಿದರು.
ನಗರದ ಶಾರದಾ ವಿಲಾಸ ಔಷಧ ಮಹಾವಿದ್ಯಾಲಯದ ಪ್ರೊ.ಎಸ್.ಚಿನ್ನಸ್ವಾಮಿ ಸಮ್ಮೇಳನ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಜೆನೆಟಿಕ್ಸ್ ಪ್ರಸ್ತುತ ಪ್ರವೃತ್ತಿಗಳು’ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಭವಿಷ್ಯದಲ್ಲಿ ಏನು ಮಾಡಬೇಕು ಎಂದು ನಿರ್ಧರಿಸಿಕೊಂಡು ಅದರ ಬಗ್ಗೆ ಗಮನಕೊಡಬೇಕು ಮತ್ತು ಆ ಮಾರ್ಗದಲ್ಲಿ ಕೆಲಸ ಮಾಡಬೇಕು ಎಂದರು.
ಶಾರದಾ ವಿಲಾಸ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ.ಹನುಮಂತಾಚಾರ್ ಜೋಶಿ ಮಾತನಾಡಿ, ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ ಕುತೂಹಲ ಬೆಳಸಿಕೊಳ್ಳಬೇಕು. ಜೆನೆಟಿಕ್ಸ್ ವಿಚಾರ ಸಂಕಿರಣಗಳಲ್ಲಿ ಭಾಗವಹಿಸುವುದರಿಂದ ಪ್ರಚಲಿತ ಬೆಳವಣಿಗೆಗಳ ಬಗ್ಗೆ ತಿಳಿಯಬಹುದು ಎಂದು ಹೇಳಿದರು.
ಬೆಂಗಳೂರಿನ ಮಲ್ಲಿಗೆ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ವಿ.ರಾಜೇಂದ್ರ, ಮೈಸೂರು ವಿಶ್ವವಿದ್ಯಾಲಯದ ಜೆನೆಟಿಕ್ಸ್ ಮತ್ತು ಜಿನೋಮಿಕ್ಸ್ ವಿಭಾಗದ ಪ್ರಾಧ್ಯಾಪಕಿ ಡಾ.ಪಿ.ಟಿ ಚೈತ್ರಾ ಹಾಗೂ ಇತರರು ಇದ್ದರು.