ಹಿಮ್ಮುಖವಾಗಿ ಚಲಿಸುತ್ತಿದೆ ಪ್ರಸ್ತುತ ಸಮಾಜ: ಡಾ.ಎಲ್. ಹನುಮಂತಯ್ಯ ಬೇಸರ

kuvempu
Published on

ಬೆಂಗಳೂರು: ರಾಷ್ಟ್ರಕವಿ ಕುವೆಂಪು ಮಾನವೀಯತೆ ನಿಲುವು ಹೊಂದಿದ್ದರು. ಎಲ್ಲ ಜಾತಿ, ಧರ್ಮದ ಮೆರವಣಿಗೆ ಮತ್ತು ಮೌಡ್ಯವನ್ನು ವಿರೋಧಿಸಿ ಸಮಾಜದಲ್ಲಿ ವಿಶ್ವಮಾನವ ಸಂದೇಶ ಸಾರಿದರು. ಆದರೂ,ಪ್ರಸ್ತುತ ಸಮಾಜ ಹಿಮ್ಮುಖವಾಗಿ ಚಲಿಸುತ್ತಿದೆ ಎಂದು ಮಾಜಿ ರಾಜ್ಯಸಭಾ ಸದಸ್ಯ ಡಾ.ಎಲ್. ಹನುಮಂತಯ್ಯ ಹೇಳಿದ್ದಾರೆ.

ಅಖಿಲ ಕರ್ನಾಟಕ ಕುವೆಂಪು ಸಾಂಸ್ಕೃತಿಕ ವೇದಿಕೆ, ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಭಾನುವಾರ ಆಯೋಜಿಸಿದ್ದ ‘ಕುವೆಂಪು ವಿಚಾರ ಸಂಕಿರಣ’ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಹಾತ್ಮ ಗಾಂಧಿ ಅವರ ದೂರ ದೃಷ್ಟಿಯೇ ಕುವೆಂಪು ಅವರಲ್ಲಿತ್ತು. ಹಾಗಾಗಿ, ಅವರ ವಿಚಾರ ಧಾರೆಯನ್ನು ಪರಿಣಾಮಕಾರಿಯಾಗಿ ಪ್ರಚಾರ ಮಾಡುವ ಅಗತ್ಯವಿದೆ. ನವೋದಯ ಕಾಲದಲ್ಲಿ ಕುವೆಂಪು ಬರವಣಿಗೆ ಪ್ರಾರಂಭಿಸಿದ್ದರು. ಆಗ ಪ್ರಕೃತಿಯ ಸೊಬಗಿನ ಬಗ್ಗೆ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದ್ದರು. ಸ್ವಾತಂತ್ಯ ಲಭಿಸಿದ 3 ದಶಕದಲ್ಲೇ ಕುವೆಂಪು, ದೇಶದಲ್ಲಿನ ಭ್ರಷ್ಟಾಚಾರ ಬಗ್ಗೆ ಮಾತನಾಡಿ ಹೊಸ ಚಿಂತನೆಯ ಅಲೆ ಎಬ್ಬಿಸಿದ್ದರು ಎಂದರು.

ಹಿರಿಯ ಸಾಹಿತಿ ಹಂಪ ನಾಗರಾಜಯ್ಯ ಮಾತನಾಡಿ, ಕನ್ನಡ ಸಾಹಿತ್ಯದಲ್ಲಿ ಕುವೆಂಪು ಹೊಸ ಅಲೆ ಸೃಷ್ಟಿಸಿದ್ದರು. ಮಕ್ಕಳಿಗೆ ಬೇಕಾಗುವ ನಾಟಕವನ್ನು ಬರೆಯುವ ಮೂಲಕ ಮಕ್ಕಳ ಸಾಹಿತ್ಯಕ್ಕೂ ಕೊಡುಗೆ ನೀಡಿದ್ದಾರೆ. ಗಿಡ,ಮರ ಬಗ್ಗೆಯೂ ಬರೆದು ಸಾಹಿತ್ಯದ ಶ್ರೀಮಂತಿಕೆಯನ್ನು ಹೆಚ್ಚಿಸಿದ್ದರು ಎಂದು ಪ್ರಶಂಸೆ ವ್ಯಕ್ತಪಡಿಸಿದರು. ನಿವೃತ್ತ ವಿಜ್ಞಾನಿ ಡಾ.ಬಿ. ನಾರಾಯಣಸ್ವಾಮಿಗೆ ‘ವಿಶ್ವಚೇತನ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕರ್ನಾಟಕ ಜಾನಪದ ಪರಿಷತ್ತಿನ ಹಿ.ಚಿ. ಬೋರಲಿಂಗಯ್ಯ ಸೇರಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net