

ವಿಜಯಪುರ : ಬೃಹತ್ ಅಣೆಕಟ್ಟೆ ಹಾಗೂ ಅತೀ ದೊಡ್ಡ ಉಷ್ಣ ವಿದ್ಯುತ್ ಸ್ಥಾವರ ಮಾತ್ರವಲ್ಲದೇ ಸೋಲಾರ್ ಮತ್ತು ಪವನ್ ವಿದ್ಯುತ್ ಉತ್ಪಾದನೆ ಮೂಲಕ ರಾಜ್ಯಕ್ಕೆ ಬೆಳಕಾಗಿರುವ ಜಿಲ್ಲೆಯ ಅನ್ನದಾತರ ಬದುಕೇ ದೀಪದ ಕೆಳಗಿನ ಕತ್ತಲೆಯಂತಾಗಿದೆ.
ಹೌದು, ಒಂದೆಡೆ ಮಳೆ ಅಭಾವದಿಂದ ಕಂಗಾಲಾದ ರೈತರಿಗೆ ವಿದ್ಯುತ್ ಲೋಡ್ ಶೆಡ್ಡಿಂಗ್ ಎಂಬ ಪೆಡಂಭೂತ ಗಾಯದ ಮೇಲೆ ಬರೆ ಎಳೆಯುತ್ತಿದೆ. ಸಕಾಲಕ್ಕೆ ವಿದ್ಯುತ್ ಪೂರೈಕೆಯಾಗದ ಹಿನ್ನೆಲೆ ಅನ್ನದಾತರು ಬೆಳೆಗಳಿಗೆ ನೀರುಣಿಸಲಾಗದೆ ಚಡಪಡಿಸುತ್ತಿದ್ದಾರೆ.
ಇದನ್ನೂ ಓದಿ: ಸಾರ್ವಜನಿಕರ ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸಿ
ಮೊದಲೇ ಮುಂಗಾರು ವಿಳಂಬದಿಂದ ಕಂಗಾಲಾಗಿರುವ ರೈತರು ಇದೀಗ ವಿದ್ಯುತ್ ಅಭಾವದಿಂದ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕಳೆದ 3 ದಿನಗಳಿಂದ ರಾಜ್ಯಾದ್ಯಂತ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆ. ಈ ಪ್ರಕ್ರಿಯೆ ಇನ್ನೂ ಒಂದು ವಾರ ಮುಂದುವರಿಯಲಿದೆ ಎಂಬ ಮಾಹಿತಿ ಅನ್ನದಾತರಲ್ಲಿ ತಳಮಳ ಸೃಷ್ಟಿಸಿದೆ.
ಈಗಾಗಲೇ ಬೆಳೆಗಳು ನೀರಿಲ್ಲದೇ ಒಣಗುತ್ತಿವೆ. ಸಕಾಲಕ್ಕೆ ವಿದ್ಯುತ್ ಪೂರೈಕೆಯಾದರೆ ಬೆಳೆ ಉಳಿಯಲಿದೆ. ಇಲ್ಲವಾದಲ್ಲಿ ಬೆಳೆ ಸಂಪೂರ್ಣ ನಾಶವಾಗಲಿದೆ ಎಂಬುದು ಕೃಷಿಕರ ಅಳಲು.
ಇದನ್ನೂ ಓದಿ: ಸೆಂಟ್ರಿಂಗ್ ಮೇಸ್ತ್ರಿ ಸಂಶಯಾಸ್ಪದ ಸಾವು
ವಿದ್ಯುತ್ ಉತ್ಪಾದನೆ ಕುಂಠಿತ: ಜಿಲ್ಲೆಯಲ್ಲಿ ಆಲಮಟ್ಟಿ ಅಣೆಕಟ್ಟೆ ಭರ್ತಿಯಾಗಿದ್ದರೂ ಬೇಡಿಕೆಗೆ ಅನುಗುಣವಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಎನ್‌ಟಿಪಿಸಿಯಿಂದ 2400 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯಾಗಲಿದ್ದು, ಶೇ. 50ರಷ್ಟು ಮಾತ್ರ ಲಭ್ಯವಾಗುತ್ತಿದೆ. ಆಲಮಟ್ಟಿ ಅಣೆಕಟ್ಟೆಯಿಂದ 312 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗಲಿದ್ದು, ಸದ್ಯ ಬೇಡಿಕೆಗೆ ಅನುಗುಣವಾಗಿ ಪೂರೈಕೆಯಾಗುತ್ತಿಲ್ಲ. ಇನ್ನು ಪವನ್ ಶಕ್ತಿಯಿಂದ 996.3 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗಲಿದ್ದು, ಸದ್ಯ ಶೇ. 60-70 ರಷ್ಟು ಮಾತ್ರ ಲಭ್ಯವಾಗುತ್ತಿದೆ. ಸೌರ ಶಕ್ತಿಯಿಂದ 315.8 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗಲಿದ್ದು, ಸದ್ಯ ಮೋಡ ಮುಸುಕಿದ ವಾತಾವರಣದಿಂದಾಗಿ ಉತ್ಪಾದನೆ ಕುಂಠಿತವಾಗಿದೆ. ಹೀಗಾಗಿ ಕೇವಲ ಶೇ. 40ರಷ್ಟು ಮಾತ್ರ ಲಭ್ಯವಾಗುತ್ತಿದೆ. ಜಿಲ್ಲೆಯ ಸಕ್ಕರೆ ಕಾರ್ಖಾನೆಗಳಿಂದ 178.84 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗಲಿದ್ದು, ಅದು ಕೇವಲ ಕಾರ್ಖಾನೆ ಆರಂಭವಿದ್ದಾಗ ಮಾತ್ರ ಸಿಗಲಿದೆ. ಜಿಲ್ಲೆಯಲ್ಲಿ 220 ಕೆವಿಯ 4, 110 ಕೆವಿಯ 42, 33 ಕೆವಿಯ 21 ಸೇರಿ ಒಟ್ಟು 66 ವಿದ್ಯುತ್ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಪ್ರತಿ ದಿನ 9 ಮಿಲಿಯನ್ ಯುನಿಟ್ ವಿದ್ಯುತ್ ಬೇಡಿಕೆ ಇದ್ದು, ತಿಂಗಳಿಗೆ ಸರಾಸರಿ 440-450 ಮೆಗಾವ್ಯಾಟ್ ವಿದ್ಯುತ್ ಬೇಕಾಗುತ್ತಿತ್ತು. ಸದ್ಯ 310 ಇಂದ 320 ಮೆಗಾ ವ್ಯಾಟ್ ಮಾತ್ರ ಸಿಗುತ್ತಿದ್ದು, 120ರಿಂದ 130 ಮೆಗಾ ವ್ಯಾಟ್‌ನಷ್ಟು ವಿದ್ಯುತ್ ಕೊರತೆ ಉಂಟಾಗಿದೆ. ಪ್ರತಿ ದಿನ 1.5 ಮಿಲಿಯನ್ ಯುನಿಟ್ ವಿದ್ಯುತ್ ಅಭಾವ ಸೃಷ್ಟಿಯಾಗಿದೆ.
ಬೆಳೆ ಉಳಿಸಿಕೊಳ್ಳಲು ಹೆಣಗಾಟ : ಜಿಲ್ಲೆಯಲ್ಲಿ ಆ.17ರವರೆಗೆ 736794 ಹೆಕ್ಟೇರ್ ಬಿತ್ತನೆ ಗುರಿ ಇದ್ದು, ಆ ಪೈಕಿ 559641 ಹೆಕ್ಟೇರ್ ಬಿತ್ತನೆಯಾಗಿದೆ. ಸಕಾಲಕ್ಕೆ ಮಳೆಯಾಗದೆ ವಿಳಂಬವಾಗಿ ಬಿತ್ತನೆ ಮಾಡಿರುವ ರೈತರಿಗೆ ವಿದ್ಯುತ್ ಲೋಡ್ ಶೆಡ್ಡಿಂಗ್ ನುಂಗಲಾರದ ತುತ್ತಾಗಿದೆ. ಪ್ರತಿ ದಿನ ಗ್ರಾಮೀಣ ಭಾಗದಲ್ಲಿ ಅಂದರೆ ಕೃಷಿ ಉದ್ದೇಶಕ್ಕಾಗಿ 7 ಗಂಟೆ ವಿದ್ಯುತ್ ಪೂರೈಸಲಾಗುತ್ತದೆ. ಇದರಲ್ಲಿ ಸಂಜೆ 6 ರಿಂದ 10ರವರೆಗೆ ಸಿಂಗಲ್ ಪೇಸ್ ಮತ್ತು ಇನ್ನುಳಿದ ಅವಧಿಯನ್ನು ಅಗತ್ಯ ಹಾಗೂ ಸಮಯ-ಸಂದರ್ಭಕ್ಕೆ ಅನುಗುಣವಾಗಿ ತ್ರಿಫೇಸ್ ವಿದ್ಯುತ್ ನೀಡಲಾಗುತ್ತದೆ. ಸದ್ಯ ಲೋಡ್ ಶೆಡ್ಡಿಂಗ್‌ನಿಂದಾಗಿ ಕನಿಷ್ಠ ಅರ್ಧಗಂಟೆಯೂ ತ್ರಿಫೇಸ್ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಹೀಗಾಗಿ ನೀರಿದ್ದರೂ ಬಳಸಿಕೊಳ್ಳಲಾಗದ ಸ್ಥಿತಿ ನಿರ್ಮಾಣವಾಗಿದೆ ಎಂಬುದು ರೈತರ ಅಂಬೋಣ.