

ಕಾರವಾರ: ಈ ವರ್ಷದ ನಿರಂತರ ಹದವಾದ ಮಳೆ ಜಿಲ್ಲೆಯ ಅಣೆಕಟ್ಟೆಗಳಲ್ಲಿ ಅಧಿಕ ವಿದ್ಯುತ್ ಉತ್ಪಾದನೆಗೆ ಅನುವು ಮಾಡಿಕೊಟ್ಟಿದೆ. ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ ಕಾಳಿ ಜಲ ವಿದ್ಯುತ್ ಯೋಜನೆಯ ಪ್ರಮುಖ ವಿದ್ಯುತ್ ಉತ್ಪಾದನಾ ಕೇಂದ್ರವಾಗಿರುವ ನಾಗಝರಿ ಪವರ್ ಹೌಸ್ ಈ ಬಾರಿ ಅತ್ಯಧಿಕ ವಿದ್ಯುತ್ ಉತ್ಪಾದನೆ ಮಾಡಿದೆ. ಮಾತ್ರವಲ್ಲ ರಾಜ್ಯದ ಪ್ರಮುಖ ಜಲ ವಿದ್ಯುತ್ ಘಟಕಗಳೂ ಈ ವರ್ಷ ಜುಲೈನಲ್ಲಿ ದಾಖಲೆಯ ವಿದ್ಯುತ್ ಉತ್ಪಾದನೆ ಮಾಡಿವೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಅಣೆಕಟ್ಟೆಗಳಲ್ಲಿ ನೀರಿನ ಪ್ರಮಾಣ ಕಡಿಮೆ ಇದೆ. 2024 ಜುಲೈ ಅಂತ್ಯಕ್ಕೆ ಸೂಪಾ ಜಲಾಶಯ ತನ್ನ ಒಟ್ಟಾರೆ ಸಾಮರ್ಥ್ಯದ ಶೇ.74 ರಷ್ಟು ಭರ್ತಿಯಾಗಿತ್ತು. ಈ ವರ್ಷ ಶೇ.65.98 ರಷ್ಟು ಮಾತ್ರ ನೀರು ಭರ್ತಿಯಾಗಿದೆ. ಆದರೆ, ಒಂದೇ ಹದದಲ್ಲಿ ನೀರು ಹರಿದು ಬರುತ್ತಿರುವುದರಿಂದ ನಿರಂತರ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಕೆಪಿಸಿ ಅಡಿಯ ವಿವಿಧ ಘಟಕಗಳಿಂದ ಜುಲೈ ತಿಂಗಳಲ್ಲಿ ಒಟ್ಟಾರೆ 3361.54 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದನೆಯಾಗಿದೆ. ಅದರಲ್ಲಿ 1653.653 ಮಿಲಿಯನ್ ಯೂನಿಟ್ ಜಲ ವಿದ್ಯುತ್‌ನಿಂದಲೇ ಉತ್ಪಾದನೆಯಾಗಿದೆ.
ಅತಿ ಹೆಚ್ಚು ವಿದ್ಯುತ್
ಕಾಳಿ ಜಲ ವಿದ್ಯುತ್ ಯೋಜನೆಯ ದೊಡ್ಡ ಘಟಕ ನಾಗಝರಿ ವಿದ್ಯುತ್ ಘಟಕವಾಗಿದೆ. 900 ಮೆಗಾವಾಟ್ ಸಾಮರ್ಥ್ಯ ಹೊಂದಿದೆ. 2 ನೇ ಘಟಕ ದುರಸ್ತಿ ನಡೆಯುತ್ತಿದ್ದರೂ ಉಳಿದ ಘಟಕಗಳು ವಿದ್ಯುತ್ ಉತ್ಪಾದನೆಯಲ್ಲಿ ತೊಡಗಿವೆ. ಜುಲೈನಲ್ಲಿ ನಾಗಝರಿ ಪವರ್ ಹೌಸ್ 347.518 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಿದೆ. ಪ್ರತಿ ದಿನ ಸರಾಸರಿ 11.210 ಮಿಲಿಯನ್ ಯೂನಿಟ್ ವಿದ್ಯುತ್‌ನ್ನು ರಾಜ್ಯದ ಗ್ರಿಡ್‌ಗೆ ರವಾನಿಸಿದೆ.
2022 ರಲ್ಲಿ ಇದೇ ಅವಧಿಯಲ್ಲಿ 233.806 ಮಿಲಿಯನ್ ಯೂನಿಟ್ (ಪ್ರತಿದಿನ ಸರಾಸರಿ 7.54 ಎಂಯು) ವಿದ್ಯುತ್ ಉತ್ಪಾದನೆ ಮಾಡಲಾಗಿತ್ತು. 2023 ರಲ್ಲಿ 235.82 ಮಿಲಿಯನ್ ಯೂನಿಟ್( ಪ್ರತಿ ದಿನ ಸರಾಸರಿ 7.54 ಎಂಯು), 2024 ರಲ್ಲಿ 273.35 (ಪ್ರತಿ ದಿನ ಸರಾಸರಿ 8.818) ವಿದ್ಯುತ್ ಉತ್ಪಾದಿಸಲಾಗಿತ್ತು.
ಅಧಿಕ ಉತ್ಪಾದನೆ
ಜಲ ವಿದ್ಯುತ್ ಉತ್ಪಾದನೆ ನೀರಿನ ಲಭ್ಯತೆಯ ಮೇಲೆ ಅವಲಂಬಿತವಾಗಿದೆ. ಅನಾವೃಷ್ಟಿಯಾದರೆ ಅಣೆಕಟ್ಟೆಗಳು ತುಂಬುವುದಿಲ್ಲ. ಅತಿವೃಷ್ಟಿಯೂ ಜಲ ವಿದ್ಯುತ್ ಉತ್ಪಾದನೆಗೆ ಅನುಕೂಲಕರವಲ್ಲ. ಮಳೆ ಜಾಸ್ತಿಯಾದರೆ ಅಣೆಕಟ್ಟೆಯ ಗೇಟ್‌ಗಳನ್ನು ತೆರೆದು ನೀರನ್ನು ಹೊರಬಿಡಬೇಕಾಗುತ್ತದೆ. ಹಾಗಾಗಿ ಹದವಾಗಿ ಮಳೆ ಬಿದ್ದರೆ ಹೈಡ್ರೋ ಪವರ್ ಹೌಸ್‌ಗಳಲ್ಲಿ ನೀರನ್ನು ಸದ್ಬಳಕೆ ಮಾಡಿಕೊಂಡು ಅಧಿಕ ವಿದ್ಯುತ್ ಉತ್ಪಾದನೆ ಮಾಡಬಹುದಾಗಿದೆ. ಆದರೆ, ಇನ್ನೊಂದು ಸಮಸ್ಯೆ ಎಂದರೆ ಉತ್ಪಾದನೆ ಮಾಡಿದ ವಿದ್ಯುತ್‌ನ್ನು ಸಂಗ್ರಹಿಸುವಂತಿಲ್ಲ. ರಾಜ್ಯದ ಬೇಡಿಕೆಗೆ ಅನುಗುಣವಾಗಿ ಬೆಂಗಳೂರಿನಲ್ಲಿರುವ ಲೋಡ್ ಡಿಸ್‌ಪ್ಯಾಚ್ ಸೆಂಟರ್ ವಿವಿಧ ಘಟಕಗಳಿಗೆ ವಿದ್ಯುತ್ ಉತ್ಪಾದನೆಯ ಗುರಿ ನೀಡುತ್ತದೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ಜಲ ವಿದ್ಯುತ್ ಘಟಕಗಳನ್ನು ನಿರಂತರವಾಗಿ ಓಡಿಸಿ ಹೆಚ್ಚಿನ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ ಎಂದು ಕೆಪಿಸಿ ಅಧಿಕಾರಿಯೊಬ್ಬರು ತಿಳಿಸಿದರು.
ಇತರ ಘಟಕಗಳ ಉತ್ಪಾದನೆ (ಮಿಲಿಯನ್ ಯೂನಿಟ್)
ಘಟಕಗಳು ಜುಲೈ 2024 ರ ವಿದ್ಯುತ್ ಉತ್ಪಾದನೆ ಜುಲೈ 2025 ರ ವಿದ್ಯುತ್ ಉತ್ಪಾದನೆ
ಕದ್ರಾ 92.31 90.19 ಕೊಡಸಳ್ಳಿ 65.23 65.01 ಸೂಪಾ 07.89 56.62 ಗೇರುಸೊಪ್ಪ 59.66 71.07