

ಅಂಕೋಲಾ : ಕಿರುದಾರಿ ರಸ್ತೆಯೊಂದರಲ್ಲಿ ತುಂಡಾಗಿ ಬಿದ್ದಿರುವ ವಿದ್ಯುತ್ ತಂತಿ ಸ್ಪರ್ಶದಿಂದ ಯುವಕ ನೊಬ್ಬನು ಮೃತಪಟ್ಟ ಘಟನೆ ತಾಲೂಕಿನ ಅವರ್ಸಾ ಗ್ರಾಪಂ.ವ್ಯಾಪ್ತಿಯ ದಂಡೇಬಾಗದಲ್ಲಿ ಗುರುವಾರ ಮದ್ಯಾಹ್ನ ನಡೆದಿದೆ.
ಅವರ್ಸಾ ದಂಡೇಬಾಗ ಬೇಟೆನಾಸ ದೇವಸ್ಥಾನದ ಹತ್ತಿರದ ಯುವಕ ಮಹಾಂತೇಶ ದೇವೇಂದ್ರ ಖಾರ್ವಿ (28) ಎಂಬಾತನೇ ಮೃತ ದುರ್ದೈವಿ. ಮನೆಯಿಂದ ಮುಂಜಾನೆ ಹೊರಗೆ ಹೋಗಿ, ಪುನಃ ಮದ್ಯಾಹ್ನ ಮನೆಗೆ ಬರುತ್ತಿದ್ದ ವೇಳೆ ರಸ್ತೆಯ ಮೇಲೆ ಮತ್ತು ಅಂಚಿಗೆ ಹರಿಯುತ್ತಿದ್ದ ನೀರಿನಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿರುವುದನ್ನು ಗಮನಿಸದೇ ತುಳಿದ ಪರಿಣಾಮ ಸ್ಥಳದಲ್ಲಿಯೇ ಕುಸಿದು ಬಿದ್ದಿರುತ್ತಾನೆ. ಆತ ನನ್ನು ಸ್ಥಳೀಯರು ತಾಲೂಕ ಆಸ್ಪತ್ರೆಗೆ ತರುವರಷ್ಟರಲ್ಲಿಯೇ ಸಾವನ್ನೊಪ್ಪಿದ್ದಾನೆ ಎಂದು ವೈದ್ಯರು ದೃಡ ಪಡಿಸಿದ್ದಾರೆ ಎನ್ನಲಾಗಿದೆ. ಪಿಐ ಚಂದ್ರಶೇಖರ ಮಠಪತಿ, ಪಿಎಸ್‌ಐ ಉದ್ದಪ್ಪ ಧರೆಪ್ಪನವರ ಘಟನೆಯ ಸ್ಥಳವನ್ನು ಪರಿಶೀಲಿಸಿ, ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಪಿಡಿಓ ಸೀತಾ ಮೇತ್ರಿ ಭೇಟಿ ನೀಡಿದ್ದರು.