ಉಪಸಮರ ಜಾತಕ ಕೌತುಕ: ಫಲಿತಾಂಶದ ಮೇಲೆ ಮೂರೂ ಪಕ್ಷಗಳ ಕುತೂಹಲ ನೋಟ

BCJ
Published on

| ಮೃತ್ಯುಂಜಯ ಕಪಗಲ್ ಬೆಂಗಳೂರು

ರಾಜರಾಜೇಶ್ವರಿ ನಗರ, ಶಿರಾ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ಸರ್ಕಾರದ ಮೇಲಾಗಲಿ, ಪ್ರತಿಪಕ್ಷಗಳ ಸ್ಥಾನಮಾನಗಳ ಮೇಲಾಗಲೀ ಪರಿಣಾಮ ಬೀರುವುದಿಲ್ಲ ಎಂದು ಮೂರೂ ಪಕ್ಷಗಳು ಹೇಳಿಕೊಳ್ಳುತ್ತಿವೆಯಾದರೂ ಪ್ರತಿಷ್ಠೆಯ ಈ ಜಿದ್ದಾಜಿದ್ದಿನ ಹೋರಾಟದ ತೀರ್ಪಿನ ಮೇಲೆ ಎಲ್ಲರ ಕೌತುಕದ ಕಣ್ಣು ನೆಟ್ಟಿರುವುದು ಅಷ್ಟೇ ಸತ್ಯ. ಗೆದ್ದೇ ಗೆಲ್ಲುತ್ತೇವೆಂಬ ಅಮಿತೋತ್ಸಾಹದಲ್ಲಿರುವ ಆಡಳಿತಾರೂಢ ಬಿಜೆಪಿ 2ನೇ ಸುತ್ತಿನ ಉಪ ಚುನಾವಣೆ ಸರ್ಕಾರದ ಸ್ಥಿತಿ ಮತ್ತಷ್ಟು ಸುಭದ್ರಗೊಳಿಸಬಹುದೆಂಬ ಲೆಕ್ಕಾಚಾರದಲ್ಲಿದೆ.

ಆರ್.ಆರ್. ನಗರ, ಶಿರಾ ಜತೆಗೆ 4 ವಿಧಾನ ಪರಿಷತ್ ಕ್ಷೇತ್ರಗಳ ಚುನಾವಣೆಗೂ ಬಿಜೆಪಿ ಅಷ್ಟೇ ಮಹತ್ವ ನೀಡಿದೆ. ಅತ್ಯಂತ ಗಂಭೀರವಾಗಿ ಪರಿಗಣಿಸಿ ಕಾರ್ಯತಂತ್ರ ರೂಪಿಸಿದ್ದಲ್ಲದೆ, ಕ್ಷೇತ್ರ ಕಾರ್ಯದಲ್ಲಿ ಪ್ರತಿಯೊಬ್ಬ ಕಾರ್ಯಕರ್ತರನ್ನು ತೊಡಗಿಸಿದ್ದೂ ಗಮನಾರ್ಹ.

ಬದಲಾಗಲಿದೆ ಬಲ: ವಿಧಾನಸಭೆ, ವಿಧಾನ ಪರಿಷತ್​ನಲ್ಲಿ ಪಕ್ಷಗಳ ಬಲಾಬಲ ಬದಲಿಸು ವಂತಹ ತಾಕತ್ತು ಈ ಚುನಾವಣೆ ಫಲಿತಾಂಶಕ್ಕಿದೆ. ಕೆಳಮನೆಯಂತೆ ಮೇಲ್ಮನೆಯಲ್ಲೂ ಮೇಲುಗೈ ಸಾಧಿಸಿದರೆ ಪ್ರಮುಖ ಮಸೂದೆಗಳ

ಅಂಗೀಕಾರವು ಕಮಲ ಪಡೆಗೆ ಸಲೀಸಾಗುತ್ತದೆ. ಕಳೆದ ಅಧಿವೇಶನದಲ್ಲಿ ಭೂಸುಧಾರಣೆ, ಎಪಿಎಂಸಿ, ಕೈಗಾರಿಕೆ ವ್ಯಾಜ್ಯಗಳ ತಿದ್ದುಪಡಿ ಕಾಯ್ದೆ ವಿಚಾರದಲ್ಲಿ ಅನುಭವಿಸಿದ ಹಿನ್ನಡೆ ಪಕ್ಷ ಮತ್ತು ಸರ್ಕಾರಕ್ಕೆ ಮುಜುಗರ ತಂದಿತ್ತು. ವಿಧಾನಸಭೆಯಲ್ಲಿ ಸಂಖ್ಯಾಬಲ ವೃದ್ಧಿಸಿದರಷ್ಟೇ ಸಾಲದು. ಪರಿಷತ್​ನಲ್ಲಿ ಕಾಂಗ್ರೆಸ್​ನ ಪಾರಮ್ಯವನ್ನು ತಗ್ಗಿಸಿ, ತನ್ನ ಬಲ ವೃದ್ಧಿಸಿಕೊಳ್ಳುವ ಗುರಿಯೊಂದಿಗೆ ಬಿಜೆಪಿ ಈ ಚುನಾವಣೆಯನ್ನು ಎದುರಿಸಿದೆ. ಬೆಂಗಳೂರು, ಈಶಾನ್ಯ ಶಿಕ್ಷಕರ ಕ್ಷೇತ್ರ, ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಗೆಲುವು ಸಾಧಿಸುವ ನಿರೀಕ್ಷೆ ಹೊಂದಿದ್ದರೆ, ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಜಯ ಗಳಿಸುವ ಭರವಸೆಯಲ್ಲಿದೆ.

ಆಶಾಭಾವ: ಶಿರಾ ವಿಧಾನಸಭೆ ಮತ್ತು ಬೆಂಗಳೂರು ಶಿಕ್ಷಕರ ಕ್ಷೇತ್ರ ಜೆಡಿಎಸ್, ಆರ್.ಆರ್.ನಗರ ವಿಧಾನಸಭೆ, ಈಶಾನ್ಯ ಶಿಕ್ಷಕರ ಕಾಂಗ್ರೆಸ್​ನ ಭದ್ರಕೋಟೆ ಎಂದು ಬಿಂಬಿತವಾಗಿದ್ದು, ಈ ನಾಲ್ಕು ಕ್ಷೇತ್ರಗಳ ಹಿಡಿತ ಸಾಧಿಸುವ ಆಶಾಭಾವ ಬಿಜೆಪಿ ಹೊಂದಿದೆ. ಪಶ್ಚಿಮ ಮತ್ತು ಆಗ್ನೇಯ ಪದವೀಧರ ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಮತ್ತು ಜೆಡಿಎಸ್ ಲೆಕ್ಕಾಚಾರ ತಲೆಕೆಳಗೂ ಮಾಡಬೇಕು ಎಂಬ ಉಮೇದಿಯಲ್ಲಿದೆ.

ಹಲವರಿಗೆ ಅಗ್ನಿಪರೀಕ್ಷೆ

ನಿರೀಕ್ಷೆಯಲ್ಲಿ ವ್ಯತ್ಯಾಸವಾದರೆ ರಾಜ್ಯದ ರಾಜಕೀಯ ನಕ್ಷೆಯಲ್ಲೂ ಹೊಸ ಬದಲಾವಣೆಗಳಾಗಲಿದೆ. ಬಿಜೆಪಿ ಮುಂಚೂಣಿ ನಾಯಕರಾದ ಬಿ.ಎಸ್.ಯಡಿಯೂರಪ್ಪ, ಕ್ಷೇತ್ರಗಳ ಉಸ್ತುವಾರಿ ಹೊತ್ತ ಆರ್.ಅಶೋಕ್, ಬಿ.ವೈ.ವಿಜಯೇಂದ್ರಗೆ ಹೊಸ ಸವಾಲು ಎದುರಾಗಲಿದೆ. ಸಂಘಟನಾತ್ಮಕ ನೆಲೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಗ್ನಿಪರೀಕ್ಷೆಗೆ ಒಳಗಾಗಲಿದ್ದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ಮತ್ತೆ ಮೈಕೊಡವಿಕೊಂಡು ಮೇಲೇಳಲು ಚಿಮ್ಮುಹಲಗೆಯಾಗುವ ಸಾಧ್ಯತೆಗಳಿವೆ.

ಫಲಿತಾಂಶದ ಸಂದೇಶವೇನು

  • ಕ್ಷೇತ್ರ ಗೆದ್ದಲ್ಲಿ ಬಿಎಸ್​ವೈ ನಾಯಕತ್ವದ ಬಲವೃದ್ಧಿ
  • ಕಾಂಗ್ರೆಸ್ ಗೆದ್ದರೆ ಡಿಕೆಶಿ, ಸಿದ್ದರಾಮಯ್ಯ ಮೇಲುಗೈ, ಸೋತರೆ ಹಿನ್ನಡೆ
  • ಶಿರಾ ಜೆಡಿಎಸ್ ಕೈತಪ್ಪಿದರೆ ಅನುಕಂಪದ ರಾಜಕಾರಣ ನೇಪಥ್ಯಕ್ಕೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net