

ಚಿಕ್ಕಮಗಳೂರು: ಖಾಕಿಯನ್ನು ಕಂಡು ವಾಹನ ಸವಾರರು ದೂರದಲ್ಲೆ ಅಡ್ಡದಾರಿ ಹಿಡಿದರೆ, ಪೊಲೀಸರು ವೈರ್ಲೆಸ್ ಮೂಲಕ ಸಹೋದ್ಯೋಗಿಗಳಿಗೆ ಸಂದೇಶ ರವಾನಿಸಿ ಅಡಗಟ್ಟಿ ಕೇಸ್ ದಾಖಲಿಸುತ್ತಿದ್ದಾರೆ. ಲಾಕ್ಡೌನ್ ಸಡಿಲಿಕೆ ನಿಯಮ ಪಾಲಿಸದ ವಾಹನ ಸವಾರರು, ಮಾಸ್ಲ್ ಧರಿಸದವರಿಗೆ ದಂಡ ವಿಧಿಸುತ್ತಿದ್ದಾರೆ.
ನಗರದ ಎಲ್ಲ ವೃತ್ತಗಳಲ್ಲೂ ಪೊಲೀಸರು ಕರ್ಫ್ಯೂ ನಿಯಮ ಕಟ್ಟುನಿಟಾಗಿ ಪಾಲಿಸುತ್ತಿದ್ದಾರೆ. ನಗರದ ಬಹುತೇಕ ಎಲ್ಲ ರಸ್ತೆಗಳಲ್ಲೂ ಅನವಶ್ಯಕವಾಗಿ ಓಡಾಡುತ್ತಿರುವ ವಾಹನಗಳನ್ನು ಅಡ್ಡಗಟ್ಟಿ ವಶಪಡಿಸಿಕೊಳ್ಳುವ ಜತೆಗೆ 24 ಗಂಟೆ ವಾಹನ ನೀಡದೆ ನಂತರ ದಂಡ ವಿಧಿಸಿ ಎಚ್ಚರಿಕೆ ಕೊಟ್ಟು ಕಳುಹಿಸುತ್ತಿದ್ದಾರೆ.
ಭಾನುವಾರದವರೆಗೆ ಸಂಜೆ 7 ಗಂಟೆಗೆ ಕರ್ತವ್ಯಕ್ಕೆ ಹಾಜರಾಗುತ್ತಿದ್ದ ಪೊಲೀಸರು ಸಾರ್ವಜನಿಕ ವಾಹನಗಳನ್ನು ಅಡ್ಡಗಟ್ಟಿ ದಾಖಲಾತಿಗಳನ್ನು ಪರಿಶೀಲಿಸುತ್ತಿದ್ದರು. ಚಿಕಿತ್ಸೆಗೆ ತೆರಳುವವರು, ಔಷಧ ತರಲು ಬಂದವರು, ಬೇರೆ ಜಿಲ್ಲೆಗಳಿಂದ ಪ್ರಯಾಣ ಮಾಡಿ ಬಂದವರು, ತರಕಾರಿ ವಾಹನ, ಸರಕು ಸಾಗಣೆ ವಾಹನ ಹಾಗೂ ತುರ್ತು ಕೆಲಸದ ನಿಮಿತ್ತ ಓಡಾಡುವ ವಾಹನಗಳಿಗೆ ಮಾತ್ರ ರಿಯಾಯಿತಿ ಕೊಟ್ಟು ಬಿಡುತ್ತಿದ್ದರು. ಉಳಿದಂತೆ ಯಾರಿಗೂ ಸಂಚಾರಕ್ಕೆ ಅವಕಾಶ ನೀಡುತ್ತಿಲ್ಲ.
ಹೊರ ಜಿಲ್ಲೆಗಳಿಂದ ದ್ವಿಚಕ್ರ ವಾಹನದಲ್ಲಿ ಅಥವಾ ಕಾರು, ಜೀಪ್ಗಳಲ್ಲಿ 7 ಗಂಟೆ ನಂತರ ಪ್ರವೇಶಿಸುವ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡು ಮಾರನೇ ದಿನದವರೆಗೂ ಪೊಲೀಸ್ ಠಾಣೆಯಲ್ಲಿರಿಸಿ ದಂಡ ಕಟ್ಟಿಸಿಕೊಂಡು ಬಿಡುತ್ತಿದ್ದರು. ಅನವಶ್ಯಕವಾಗಿ ಓಡಾಡುತ್ತಿದ್ದ ನೂರಕ್ಕೂ ಹೆಚ್ಚು ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಜೂ.1ರಿಂದ ರಾತ್ರಿ 9ರಿಂದ ಬೆಳಗಿನಜಾವ 5 ಗಂಟೆವರೆಗೆ ಕರ್ಫ್ಯೂ ಜಾರಿಯಲ್ಲಿರಲಿದೆ.
ಮಾಸ್ಕ್ ಹಾಕದವರಿಗೂ ದಂಡ: ಯಾವುದೆ ತುರ್ತು ಕೆಲಸವಿದ್ದರೂ ಮಾಸ್ಕ್ ಹಾಕಿಕೊಂಡು ರಸ್ತೆಯಲ್ಲಿ ಓಡಾಡುವುದು ಕಡ್ಡಾಯವಾಗಿದ್ದು ಕೆಲವೆಡೆ ಮಾಸ್ಕ್ ಹಾಕಿಕೊಳ್ಳದೆ ಸಂಚರಿಸುವುದು, ವಾಹನ ಚಾಲನೆ ಮಾಡುವವರನ್ನು ತಡೆದು 100 ರೂ. ದಂಡ ವಿಧಿಸಿ ಮತ್ತೆ ರಸ್ತೆಗೆ ಬರಬೇಕಾದರೆ ಮಾಸ್ಕ್ ಧರಿಸದೆ ಬಂದರೆ ದುಪ್ಪಟ್ಟು ದಂಡ ವಿಧಿಸಬೇಕಾಗುತ್ತದೆ ಎಂಬ ಎಚ್ಚರಿಕೆ ಸಂದೇಶ ಪೊಲೀಸರು ನೀಡುತ್ತಿದ್ದಾರೆ.
120 ಸಿಬ್ಬಂದಿ ನೇಮಕ: ನಗರದಾದ್ಯಂತ ಎಲ್ಲ ವೃತ್ತಗಳಲ್ಲೂ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತಾಲೂಕು ಹಾಗೂ ಜಿಲ್ಲೆಯ ಗಡಿಭಾಗವಾದ ಮಾಗಡಿ ಹ್ಯಾಂಡ್ಪೋಸ್ಟ್, ಕೆ.ಬಿ.ಹಾಳ್, ಕೆ.ಆರ್.ಪೇಟೆ. ಆಲೇನಹಳ್ಳಿ, ಗವನಹಳ್ಳಿ ಚೆಕ್ಪೋಸ್ಟ್ಗಳಲ್ಲಿ ತಪಾಸಣೆ ಕಟ್ಟುನಿಟ್ಟಾಗಿ ಮಾಡಲಾಗುತ್ತಿದೆ. 120 ಸಿಬ್ಬಂದಿ ರಾತ್ರಿ ಕರ್ತವ್ಯ ನಿರ್ವಹಿಸುತ್ತಿದ್ದು ಎಎಸ್ಪಿ ಶ್ರುತಿ, ಡಿವೈಎಸ್ಪಿ ಬಸಪ್ಪ ಅಂಗಡಿ ಗಸ್ತು ತಿರುಗುತ್ತಿದ್ದಾರೆ.