ತುಮಕೂರು ಜಿಲ್ಲೆಯಲ್ಲಿ 17ರವರೆಗೆ ನಿಷೇಧಾಜ್ಞೆ ಜಾರಿ

DSC_2140
Published on

ತುಮಕೂರು: ಕರೊನಾ ಸೋಂಕು ನಿಯಂತ್ರಿಸುವ ಸಲುವಾಗಿ ಮೇ 4ರಿಂದ 17ರವರೆಗೆ ಜಿಲ್ಲಾದ್ಯಂತ ಕಲಂ 144ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಆದೇಶ ಹೊರಡಿಸಿದ್ದಾರೆ.

ಈ ಅವಧಿಯಲ್ಲಿ ಜಿಲ್ಲಾದ್ಯಂತ ಸಾರ್ವಜನಿಕ ಸಾರಿಗೆ ಸಂಪರ್ಕ, ಧಾರ್ಮಿಕ ಕೇಂದ್ರ, ದೇವಸ್ಥಾನಗಳಲ್ಲಿ ದೇವರ ದರ್ಶನ ಹಾಗೂ ಪೂಜಾ ಕೈಂಕರ್ಯ ಹೊರತುಪಡಿಸಿ ಎಲ್ಲ ಸಾಮೂಹಿಕ ಸೇವೆ, ಜಿಲ್ಲೆಯಲ್ಲಿ ನಡೆಯುವ ಜಾತ್ರೆ, ಉತ್ಸವ, ಸಂತೆ, ಮತ್ತಿತರ ಜನಸಂದಣಿ ಸೇರುವ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ.

ಜಿಲ್ಲೆಯಾದ್ಯಂತ ಚಿತ್ರಮಂದಿರ, ನೈಟ್‌ಕ್ಲಬ್, ನಾಟಕ ಪ್ರದರ್ಶನ, ಶಾಪಿಂಗ್ ಮಾಲ್ ಹಾಗೂ ಎಲ್ಲ ಶಿಕ್ಷಣ ಸಂಸ್ಥೆಗಳು, ಸಂಶೋಧನೆ, ಕೋಚಿಂಗ್ ಸೆಂಟರ್‌ಗಳನ್ನು ಮುಚ್ಚುವಂತೆ ಆದೇಶಿಸಲಾಗಿದ್ದು, ಸರ್ಕಾರಿ ಸಮಾರಂಭಗಳಲ್ಲಿ ಜನರು ಹೆಚ್ಚು ಸೇರುವ ಕಾರ್ಯಕ್ರಮ ರದ್ದುಗೊಳಿಸಲಾಗಿದೆ. ಎಲ್ಲ ರೀತಿಯ ಸಾಮಾಜಿಕ, ರಾಜಕೀಯ, ಕ್ರೀಡೆ, ಮನರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಗುಂಪು ಸೇರುವುದನ್ನು ನಿರ್ಬಂಧಿಸಲಾಗಿದೆ.

ನಿಷೇಧಾಜ್ಞೆ ಅನ್ವಯ ರಸ್ತೆ ಬದಿ ಅಥವಾ ಇನ್ನಿತರ ಸಾರ್ವಜನಿಕ ಪ್ರದೇಶದ ತೆರೆದ ಸ್ಥಳಗಳಲ್ಲಿ ಯಾವುದೇ ತರಹದ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವಂತಿಲ್ಲ. ದೇವರ ಸೇವೆ ರೂಪದಲ್ಲಿ ನಡೆಸುವ ಸಾಮೂಹಿಕ ಭೋಜನ ಕಾರ್ಯಕ್ರಮ ರದ್ದುಪಡಿಸಲಾಗಿದೆ. ದೇವಸ್ಥಾನ, ಮಸೀದಿ, ಚರ್ಚ್ ಒಳಗೊಂಡಂತೆ ಎಲ್ಲ ಧಾರ್ಮಿಕ ಕೇಂದ್ರಗಳಲ್ಲಿ ಗುಂಪು ಗುಂಪಾಗಿ ಬರುವ ಸಾರ್ವಜನಿಕ ಪ್ರವೇಶವನ್ನು ನಿಷೇಧಿಸಲಾಗಿದೆ.

ಕಚೇರಿ ಅನವಶ್ಯಕ ಪ್ರವೇಶಕ್ಕೆ ಬ್ರೇಕ್: ಜಿಲ್ಲೆಯ ಎಲ್ಲ ಸಾರ್ವಜನಿಕ ಕಚೇರಿಗೆ ಅನಗತ್ಯವಾಗಿ ಪದೇಪದೆ ಬರುವ ಸಾರ್ವಜನಿಕರ ಭೇಟಿ ನಿಷೇಧಿಸಲಾಗಿದ್ದು, ಅವಶ್ಯಕತೆ ಇದ್ದಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಿ ಸಾರ್ವಜನಿಕ ಭೇಟಿಗೆ ಕಚೇರಿಯ ಮುಖ್ಯಸ್ಥರು ಅವಕಾಶ ಕಲ್ಪಿಸಬೇಕು. ಪಿ.ಜಿ., ವಸತಿ ನಿಲಯ, ಸಾರ್ವಜನಿಕ ಹಾಸ್ಟೆಲ್‌ಗಳಲ್ಲಿ ಸಂಬಂಧಿಸಿದ ಮಾಲೀಕರು ಹಾಗೂ ನಿಲಯ ಪಾಲಕರು ಸ್ವಚ್ಛತೆ, ಶುಚಿತ್ವ, ಪರಸ್ಪರ ಅಂತರ ಕಾಪಾಡಿಕೊಂಡು ಸೋಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಬೇಕು.

ಆರೋಗ್ಯ ಸೇವೆಯಲ್ಲಿ ವ್ಯತ್ಯಯ ಇಲ್ಲ: ಆಸ್ಪತ್ರೆಗಳು ಹಾಗೂ ಅದಕ್ಕೆ ಸಂಬಂಧಿಸಿದ ಎಲ್ಲ ವೈದ್ಯಕೀಯ ಸಂಸ್ಥೆ, ತಯಾರಿಕಾ ಮತ್ತು ವಿತರಣಾ ಘಟಕ, ಖಾಸಗಿ ಮತ್ತು ಸಾರ್ವಜನಿಕ ವಲಯಗಳು, ಔಷಧಾಲಯಗಳು, ಔಷಧ ಮತ್ತು ವೈದ್ಯಕೀಯ ಸಲಕರಣೆಗಳನ್ನು ಪೂರೈಸುವ ಮಳಿಗೆ, ಪ್ರಯೋಗಾಲಯ, ನರ್ಸಿಂಗ್ ಹೋಂ, ಆಂಬುಲೆನ್ಸ್, ಪಶುಚಿಕಿತ್ಸಾಲಯ, ಜನೌಷಧಕೇಂದ್ರ, ಸಂಶೋಧನಾ ಪ್ರಯೋಗಾಲಯಗಳ ಸೇವೆಗಳು ಮುಂದುವರಿಯುತ್ತವೆ.

ಸರಕು ಸಾಗಣೆಗೂ ಅವಕಾಶ: ನ್ಯಾಯಬೆಲೆ ಅಂಗಡಿ, ದಿನಸಿ ಅಂಗಡಿ, ಹಣ್ಣು , ತರಕಾರಿ, ಹಾಲು ಮತ್ತು ಡೇರಿ ಉತ್ಪನ್ನಗಳ ಮಾರಾಟ ಮಳಿಗೆ, ಮಾಂಸ ಮತ್ತು ಮೀನಿನ ಆಹಾರ, ಬಿಸ್ಕತ್ ಮತ್ತು ಬೇಕರಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಬಿತ್ತನೆ ಬೀಜ, ಕೀಟನಾಶಕ, ರಸಗೊಬ್ಬರ ಮಳಿಗೆಗಳನ್ನು ತೆರೆಯಲು ಹಾಗೂ ಆಹಾರ ಸಾಮಗ್ರಿಗಳ ಸಾಧನಗಳನ್ನು ಪ್ಯಾಕಿಂಗ್ ಘಟಕಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಅಗತ್ಯ ಸರಕು ಸಾಗಣೆಗೆ ಅವಕಾಶ ನೀಡಲಾಗಿದೆ.

20 ಜನಕ್ಕೆ ಅನುಮತಿ: ಅಂತ್ಯಕ್ರಿಯೆಯಲ್ಲಿ 20ಕ್ಕಿಂತ ಹೆಚ್ಚು ವ್ಯಕ್ತಿಗಳು ಸೇರತಕ್ಕದ್ದಲ್ಲ. ನಿಷೇಧಾಜ್ಞೆ ಅವಧಿಯಲ್ಲಿ ರಾತ್ರಿ 7 ಗಂಟೆಯಿಂದ ಬೆಳಗ್ಗೆ 7 ಗಂಟೆಯವರೆಗೆ ಸಾರ್ವಜನಿಕರ ಅನಗತ್ಯ ಓಡಾಟವನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ನಿಷೇಧಿತ ಅವಧಿಯಲ್ಲಿ ಯಾವುದೇ ವ್ಯಕ್ತಿ ಆದೇಶವನ್ನು ಉಲ್ಲಂಘಿಸಿದಲ್ಲಿ ಅಂತಹವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯೊಂದಿಗೆ ಭಾರತೀಯ ದಂಡ ಸಂಹಿತೆ ಕಲಂ 188ರ ರೀತಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net