

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿದ್ದು, ಪೊಲೀಸರು ಕಟ್ಟುನಿಟ್ಟಿನ ತಪಾಸಣೆ ಕೈಗೊಂಡಿದ್ದಾರೆ. ಅನವಶ್ಯಕ ಓಡಾಟ ನಡೆಸಿದವರ ವಾಹನ ವಶಕ್ಕೆ ಪಡೆದಿದ್ದಾರೆ. ಮಂಗಳೂರಿನ ಸರ್ಕೀಟ್ ಹೌಸ್, ಕಾವೂರು, ನಂತೂರು, ಕೂಳೂರು, ಕ್ಲಾಕ್ ಟವರ್ ಮೊದಲಾದ 35 ಕಡೆ ಪೊಲೀಸರು ತಪಾಸಣೆ ಬಿಗುಗೊಳಿಸಿದ್ದಾರೆ. ಆಸ್ಪತ್ರೆ, ಮೆಡಿಕಲ್, ಹಾಲು, ಪತ್ರಿಕೆ ಹೊರತುಪಡಿಸಿ ಇನ್ಯಾವುದೇ ಚಟುವಟಿಕೆಗಳಿಗೆ ಅವಕಾಶ ನೀಡಿಲ್ಲ.
ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ನೇತೃತ್ವದಲ್ಲಿ ಕ್ಲಾಕ್ ಟವರ್ ಬಳಿ ವಾಹನ ತಪಾಸಣೆ ನಡೆಸಿದರು. ಅನಗತ್ಯವಾಗಿ ರಸ್ತೆಗಿಳಿದಿದ್ದ ಹಲವು ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿವೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳು ಸಂಚರಿಸುತ್ತಿವೆ. ಜನರಿಂದ ಉತ್ತಮ ಸಹಕಾರ ವ್ಯಕ್ತವಾಗಿದೆ.
ವಲಸೆ ಕಾರ್ಮಿಕರು ಎಂದಿನಂತೆ ಕಾವೂರು, ಉರ್ವಸ್ಟೋರ್, ಕೂಳೂರು ಮೊದಲಾದ ಕಡೆ ಬೆಳಗ್ಗೆ ಜಮಾಯಿಸಿದ್ದರು. ಕೆಲಸಕ್ಕೆ ಅವರನ್ನು ಕರೆದೊಯ್ಯಲು ಯಾರೂ ಬರದಿದ್ದ ಕಾರಣ 9 ಗಂಟೆ ಬಳಿಕ ಮನೆಗಳಿಗೆ ಹಿಂತಿರುಗಿದರು.
ಸರ್ಕಾರಿ ಕಚೇರಿಗಳಿಗೆ ರಜೆ: ನಾಲ್ಕನೇ ಶನಿವಾರವಾದ ಕಾರಣ ಸರ್ಕಾರಿ ಕಚೇರಿಗಳಿಗೆ ರಜೆ. ಹಾಗಾಗಿ ಸರ್ಕಾರಿ ನೌಕರರಿಲ್ಲದ ಕಾರಣ ತುರ್ತು ಕೆಲಸಗಳಿಗೆ ಓಡಾಟ ನಡೆಸುವವರ ಸಂಖ್ಯೆ ವಿರಳವಾಗಿತ್ತು. ಆರೋಗ್ಯ ಇಲಾಖೆ ಸಿಬ್ಬಂದಿ ಮಾತ್ರ ಓಡಾಟ ನಡೆಸಿದರು. ದೂರದ ಊರುಗಳಿಂದ ಬರುವವರಿಗೆ ಕೆಎಸ್ಸಾರ್ಟಿಸಿ ಕೋವಿಡ್ ವಿಶೇಷ ಬಸ್ ವ್ಯವಸ್ಥೆ ಮಾಡಿತ್ತು.
ತಾಲೂಕು ಕೇಂದ್ರಗಳು ಬಂದ್: ತಾಲೂಕು ಕೇಂದ್ರಗಳಾದ ಸುಳ್ಯ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ, ಮೂಡುಬಿದಿರೆ ಮೊದಲಾದ ಕಡೆಗಳಲ್ಲೂ ವಾರಾಂತ್ಯ ಕರ್ಫ್ಯೂಗೆ ಸಾರ್ವಜನಿಕರಿಂದ ಉತ್ತಮ ಬೆಂಬಲ ವ್ಯಕ್ತವಾಗಿದೆ. ತುರ್ತು ವಾಹನಗಳಷ್ಟೇ ಓಡಾಟ ನಡೆಸುತ್ತಿರುವುದು ಕಂಡು ಬಂತು. ಗಡಿ ಭಾಗಗಳ ಚೆಕ್‌ಪೋಸ್ಟ್‌ಗಳಲ್ಲಿ ಹೆಚ್ಚಿನ ತಪಾಸಣೆ ನಡೆಸಲಾಯಿತು. ವಾರಾಂತ್ಯ ಕರ್ಫ್ಯೂ ಸೋಮವಾರ ಬೆಳಗ್ಗೆ 7 ಗಂಟೆ ತನಕ ಮುಂದುವರಿಯಲಿದೆ.
ಕರ್ಫ್ಯೂ ಇದ್ದರೂ ಜನತೆ ಲಸಿಕಾ ಕೇಂದ್ರಗಳಿಗೆ ಆಗಮಿಸಿದ್ದರು. ಟೋಕನ್ ತೆಗೆದುಕೊಂಡು ಲಸಿಕೆ ಪಡೆಯಲು ಅವಕಾಶವಿರುವುದರಿಂದ ಜನತೆ ನಿಗದಿತ ಸಮಯಕ್ಕೆ ಬಂದು ಲಸಿಕೆ ಹಾಕಿಸಿಕೊಂಡು ಹಿಂತಿರುಗಿದರು.