

ಚಿಕ್ಕಬಳ್ಳಾಪುರ: ರಾಜ್ಯ ಸರ್ಕಾರವು ವೀಕೆಂಡ್ ಕರ್ಫ್ಯೂ ರದ್ದುಗೊಳಿಸಿದ್ದರೂ ನಂದಿ ಗಿರಿಧಾಮದಲ್ಲಿ ಪ್ರವಾಸಿಗರ ಪ್ರವೇಶ ನಿರ್ಬಂಧ ತೆರವಾಗಿಲ್ಲ.
ಜಿಲ್ಲೆಯಲ್ಲಿ ನಿರಂತರವಾಗಿ ಕರೊನಾ ಪ್ರಕರಣಗಳು ಏರಿಕೆಯಾಗುತ್ತಿವೆ. ವಿವಿಧ ಭಾಗಗಳಿಂದ ಹೆಚ್ಚಾಗಿ ಪ್ರವಾಸಿಗರು ಇಲ್ಲಿಗೆ ಆಗಮಿಸುವುದರಿಂದ ಸೋಂಕು ಮತ್ತಷ್ಟು ಹರಡುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ನಂದಿ ಬೆಟ್ಟದಲ್ಲಿ ಜಿಲ್ಲಾಡಳಿತ ವೀಕೆಂಡ್ ಕರ್ಫ್ಯೂ ಮುಂದುವರಿಸಿದೆ. ಪ್ರವಾಸಿಗರು ಗಿರಿಧಾಮ ಪ್ರವೇಶಿಸಲು ಅವಕಾಶ ನೀಡುತ್ತಿಲ್ಲ. ಇದರಿಂದ ಹಲವು ದಿನಗಳ ಬಳಿಕ ರಜೆಯ ಮಜಾವನ್ನು ಬೆಟ್ಟದಲ್ಲಿ ಅನುಭವಿಸುವ ಜನರ ನಿರಾಸೆಗೆ ತಣ್ಣೀರು ಎರಚಿದಂತಾಗಿದೆ.
ಸಾಮಾನ್ಯ ದಿನಗಳಲ್ಲಿ ಪ್ರವಾಸಿ ತಾಣಕ್ಕೆ 6 ರಿಂದ 7 ಸಾವಿರ, ವಿಶೇಷ ದಿನಗಳಲ್ಲಿ 11 ರಿಂದ 12 ಸಾವಿರ ಮಂದಿ ಬರುತ್ತಾರೆ. ಅದರಲ್ಲೂ ಕೇರಳ, ಮಹಾರಾಷ್ಟ್ರ ಸೇರಿ ವಿವಿಧ ಭಾಗಗಳ ಜನರ ಆಗಮನದಿಂದ ಸೋಂಕು ಹರಡುವ ಸಾಧ್ಯತೆ ಇದೆ. ಒಂದು ವೇಳೆ ಕರೊನಾ ಮಾರ್ಗಸೂಚಿ ಪಾಲನೆಯೊಂದಿಗೆ ಗಿರಿಧಾಮಕ್ಕೆ ಭೇಟಿ ನೀಡಲು ಜನರಿಗೆ ಅವಕಾಶ ನೀಡಿದರೂ ಜನಸಂದಣಿ ನಿಯಂತ್ರಣ ಕಷ್ಟ.
ಮೋಜು-ಮಸ್ತಿ, ಸೆಲ್ಫಿ ನೆಪದಲ್ಲಿ ಮಾಸ್ಕ್ ಧರಿಸುವಿಕೆ, ಪರಸ್ಪರ ಅಂತರ ಕಾಪಾಡಿಕೊಳ್ಳುವಿಕೆ ನಿಯಮ ಉಲ್ಲಂಘಿಸಲಾಗುತ್ತದೆ. ಬೆಳಗ್ಗೆ 6ಕ್ಕೆ ವಿವಿಧ ಭಾಗಗಳಿಂದ ಒಮ್ಮೆಲೆ ಪ್ರವಾಸಿಗರು ಆಗಮಿಸಿದ ಸಂದರ್ಭದಲ್ಲಿ ನಂದಿಬೆಟ್ಟದ ತಪ್ಪಲಿನ ಚೆಕ್ ಪೋಸ್ಟ್ ಬಳಿ ಟ್ರಾಫಿಕ್ ಜಾಮ್ ಸೇರಿ ನಾನಾ ಸಮಸ್ಯೆಗಳು ಉಂಟಾಗುತ್ತವೆ. ಇದಕ್ಕೆ ನಿರ್ಬಂಧ ತೆರವುಗೊಳಿಸುವ ಘೋಷಣೆ ಮಾಡಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಜಿಲ್ಲೆಯ ಇತರ ತಾಣಗಳತ್ತ ಚಿತ್ತ:ಜಿಲ್ಲೆಯು ಬೆಂಗಳೂರಿಗೆ ಸಮೀಪದಲ್ಲಿರುವುದರಿಂದ ಐಟಿ ನೌಕರರು ಸೇರಿ ಅನೇಕ ಜನರು ಈ ಭಾಗದಲ್ಲಿನ ನೆಚ್ಚಿನ ತಾಣಗಳಲ್ಲಿ ಸುತ್ತಾಡಿ ಮುದ ಅನುಭವಿಸುತ್ತಾರೆ. ಆದರೆ, ವೀಕೆಂಡ್ ಕರ್ಫ್ಯೂ ರದ್ದಾಗಿದ್ದರೂ ಶನಿವಾರ ಬಹುತೇಕ ಎಲ್ಲೂ ಪ್ರವಾಸಿಗರ ದಟ್ಟಣೆ ಕಂಡು ಬರಲಿಲ್ಲ. ಬೆರಳೆಣಿಕೆಯ ಜನರು ಬಂದಿದ್ದರು. ಇನ್ನು ರಜೆಯ ದಿನ ಭಾನುವಾರ ಹೆಚ್ಚಿನ ಜನ ಆಗಮನದ ನಿರೀಕ್ಷೆ ಇದೆ. ಪ್ರಸ್ತುತ ನಂದಿ ಬೆಟ್ಟ ಪ್ರವಾಸಕ್ಕೆ ನಿರ್ಬಂಧಗಳಿರುವ ಹಿನ್ನೆಲೆಯಲ್ಲಿ ವೀಕ್ಷಣೆಗೆ ಜಿಲ್ಲೆಯ ಸ್ಕಂದಗಿರಿ, ಲಕ್ಷ್ಮೀನರಸಿಂಹಸ್ವಾಮಿ ಮತ್ತು ಸೆಲ್ಫಿ ಬಂಡೆ ಖ್ಯಾತಿಯ ಆವಲಬೆಟ್ಟ, ಹನುಮಂತಪುರದ ಜಾಲಾರಿ ನರಸಿಂಹಸ್ವಾಮಿ ದೇವಾಲಯ, ದಂಡಿಗಾನಹಳ್ಳಿ ಜಲಾಶಯ, ಕೇತೇನಹಳ್ಳಿ ಫಾಲ್ಸ್, ರಂಗಸ್ಥಳ, ಸ್ಕಂದಗಿರಿ, ಮುದ್ದೇನಹಳ್ಳಿ, ಗಡಿದಂ ವೆಂಕಟರಮಣಸ್ವಾಮಿ, ಪಾಪಾಗ್ನಿ ಮತ್ತಿತರ ಪ್ರವಾಸಿ ತಾಣಗಳಾದ ಸ್ಥಳಗಳನ್ನು ನೆಚ್ಚಿಕೊಳ್ಳಬೇಕಾಗಿದೆ.
ಬಿಗಿ ಬಂದೋ ಬಸ್ತ್:ವಿಕೇಂಡ್ ಕರ್ಫ್ಯೂ ರದ್ದಾಗಿರುವುದರಿಂದ ಪ್ರವಾಸಿಗರು ನಂದಿ ಗಿರಿಧಾಮ ಪ್ರವೇಶಿಸುವುದನ್ನು ನಿರ್ಬಂಧಿಸಲು ಬೆಟ್ಟದ ತಪ್ಪಲಿನಲ್ಲಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ. ಕಳೆದ ಹಲವು ತಿಂಗಳಿಂದಲೂ ನಂದಿ ಗಿರಿಧಾಮದಲ್ಲಿ ವಿಕೇಂಡ್ ಕರ್ಫ್ಯೂ ಇದೆ. ಹೊಸ ವರ್ಷಾಚರಣೆಯ ಸಂಭ್ರಮದ ಸಂದರ್ಭದಲ್ಲಿ ನಿರಂತರವಾಗಿ ಮೂರು ದಿನ ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು. ಇದರ ನಡುವೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯು ನಂದಿಬೆಟ್ಟಕ್ಕೆ ಬರುವ ಪ್ರವಾಸಿಗರ ತಡೆಗೆ ಚೆಕ್ ಪೋಸ್ಟ್ ಸ್ಥಾಪಿಸಿದೆ.
ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ರದ್ದಾಗಿದ್ದರೂ ನಂದಿ ಗಿರಿಧಾಮಕ್ಕೆ ಶನಿವಾರ ಮತ್ತು ಭಾನುವಾರ ಪ್ರವಾಸಿಗರ ಪ್ರವೇಶ ನಿಷೇಧದ ನಿರ್ಬಂಧ ತೆರವಾಗಿಲ್ಲ. ಜಿಲ್ಲಾಧಿಕಾರಿಗಳ ಆದೇಶ ನೀಡಿದ ಬಳಿಕ ಭೇಟಿಗೆ ಅವಕಾಶ ನೀಡಲಾಗುತ್ತದೆ. ಗೋಪಾಲ್, ನಂದಿ ಗಿರಿಧಾಮ ವಿಶೇಷಾಧಿಕಾರಿ