

ಶೃಂಗೇರಿ: ಆಯುರ್ವೇದ ಪದ್ದತಿಯಲ್ಲಿ ರೋಗ ಸಂಪೂರ್ಣ ಗುಣವಾಗುವುದಲ್ಲದೇ, ತೆಗೆದು ಕೊಳ್ಳುವ ಔಷಧಿಯಿಂದ ಅಡ್ಡ ಪರಿಣಾಮ ಉಂಟಾಗುವುದಿಲ್ಲ ಎಂದು ಶ್ರೀ ಶಾರದಾ ಧನ್ವಂತರಿ ಆಸ್ಪತ್ರೆ ಆಯುರ್ವೇದ ವಿಭಾಗದ ಡಾ.ಸುಹಾಸ್ ಹೇಳಿದರು.
ಪಟ್ಟಣದ ಗೌರಿಶಂಕರ್ ಸಭಾಂಗಣದಲ್ಲಿ ಭಾನುವಾರ ಶ್ರೀಶಾರದಾ ಧನ್ವಂತರಿ ಆಸ್ಪತ್ರೆ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣೆ ಮತ್ತು ಔಷಧ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ನಮ್ಮ ಪೂರ್ವಿಕರು ಆಯುರ್ವೇದ ಔಷಧಿಯನ್ನು ಉಪಯೋಗಿಸುತ್ತಿದ್ದರು. ಋಷಿ ಮುನಿಗಳು ನಾರು, ಬೇರಿನಿಂದ ತಯಾರಿಸಿದ ಔಷಧಗಳನ್ನು ಸಂಗ್ರಹಿಸಿ ಅಗತ್ಯವಿದ್ದಾಗ ಸೇವಿಸುತ್ತಿದ್ದರು. ಬದಲಾದ ಕಾಲದಲ್ಲಿ ಕಾಯಿಲೆಗಳು ತ್ವರಿತವಾಗಿ ಗುಣವಾಗಲು ಅಲೋಪತಿ ಔಷಧ ಪಡೆಯುತ್ತಾರೆ. ಆಯುರ್ವೇದ ಪದ್ದತಿಯಿಂದ ಗುಣವಾಗುವ ಕಾಯಿಲೆ ಮತ್ತೆ ಮತ್ತೆ ಕಾಡುವ ಸಂದರ್ಭ ಕಡಿಮೆ ಇರುತ್ತದೆ ಎಂದರು.
ಉಚಿತವಾಗಿ ರೋಗಿಗಳ ತಪಾಸಣೆ, ಚಿಕಿತ್ಸೆ ಹಾಗೂ ಔಷಧ ನೀಡಲಾಯಿತು. ಶಿಬಿರದಲ್ಲಿ ಡಾ.ನಮಿತಾ ಆಸ್ಪತ್ರೆ ಸಿಬ್ಬಂದಿ, ರಂಗನಾಥ ಭೀಡೆ, ಅನಂತ ಭಟ್ ಇದ್ದರು.