

ಶ್ರೀನಿವಾಸಪುರ : ಕಾರ್ಮಿಕರ ಬೆವರ ಹನಿ ಮಾಸುವ ಮುನ್ನ ದುಡಿಮೆಯ ಹಣವನ್ನು ಕಾರ್ಮಿಕರಿಗೆ ಪಾವತಿಸುವ ಜತೆಗೆ ಕಾರ್ಮಿಕರ ಇಲಾಖೆಯಲ್ಲಿ ನಕಲಿ ದಾಖಲೆ ಸೃಷ್ಟಿಸಿ, ಕೋಟಿ ಕೋಟಿ ಹಣ ಲೂಟಿ ಹೊಡೆಯುವ ದಲ್ಲಾಳಿಗಳ ಹಾವಳಿಗೆ ಕಡಿವಾಣ ಹಾಕಬೇಕು ಎಂದು ರಾಜ್ಯ ರೈತ ಸಂಘದ ಮಹಿಳಾ ಜಿಲ್ಲಾಧ್ಯೆ ಎ.ನಳಿನಿಗೌಡ ಸರ್ಕಾರಕ್ಕೆ ಒತ್ತಾಯಿಸಿದರು.
ತಾಲೂಕಿನ ಬಂಗವಾದಿ ಗ್ರಾಮದ ಪ್ರಗತಿಪರ ರೈತ ಮಹಿಳೆ ಸಶೀಲಾ ಅವರ ಕೃಷಿ ಭೂಮಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಕಾರ್ಮಿಕರ ದಿನಾಚರಣೆಯಲ್ಲಿ ಮಾತನಾಡಿದರು. ಕೃಷಿ ಕ್ಷೇತ್ರದಿಂದ ಪ್ರಾರಂಭವಾಗುವ ಕಾರ್ಮಿಕರ ದುಡಿಮೆ ಕೈಗಾರಿಕೆ ಕ್ಷೇತ್ರ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.ಪ್ರತಿಯೊಂದು ದೇಶದ ಆರ್ಥಿಕ ಅಭಿವೃದ್ಧಿ ಆ ದೇಶದ ಕಾರ್ಮಿಕರ ಮೇಲೆ ಅವಲಂಬಿಸಿರುತ್ತದೆ. ದಕ್ಷತೆಯಿಂದ ಕೂಡಿದ ಕಾರ್ಮಿಕ ವರ್ಗದಿಂದ ಮಾತ್ರ ದೇಶದ ಆರ್ಥಿಕ ಪ್ರಗತಿ ಸಾಧ್ಯ. ಕಾರ್ಮಿಕರ ಪ್ರತಿ ಹನಿ ಬೆವರೂ ಸಹ ದೇಶದ ಆರ್ಥಿಕತೆಯ ಅಭಿವೃದ್ಧಿಯ ಮೆಟ್ಟಿಲು. ಕಾರ್ಮಿಕ ಕೈ ಬಿಟ್ಟರೆ ಆರ್ಥಿಕತೆ ನೆಲಕಚ್ಚುವ ಜತೆಗೆ ಕಾರ್ಮಿಕರಿಲ್ಲದ ದೇಶವನ್ನು ಊಹಿಸಲು ಸಾಧ್ಯವಿಲ್ಲ ಎಂದರು. ಕೂಲಿಕಾರ್ಮಿಕ ಮಹಿಳೆ ಶೈಲಜಾ ಮಾತನಾಡಿ, ದಿನದ 24 ಗಂಟೆ ದುಡಿಯುವ ಕಾರ್ಮಿಕರಿಗೆ ಕಾರ್ಮಿಕ ಇಲಾಖೆ ನಿಯಮದ ಪ್ರಕಾರ ಮಾಲೀಕನು ಕನಿಷ್ಠ ವೇತನ ನೀಡಬೇಕು.
ಗುಣಮಟ್ಟದ ಆಹಾರ, ಆರೋಗ್ಯ, ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ನೀಡಬೇಕಾದ ಮಾಲೀಕನು ಯಾವುದೇ ಕಾರ್ಮಿಕ ನಿಯಮ ಪಾಲಿಸದೆ ಕಾರ್ಮಿಕ ವಿರೋಧಿ ನೀತಿ ಅನುಸರಿಸುವ ಮೂಲಕ ಕಾರ್ಮಿಕರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಕಾರ್ಮಿಕರ ವರ್ಗವನ್ನು ಶ್ರಮಿಕರ ವರ್ಗವೆಂದು ಪರಿಗಣಿಸಿ ಸರ್ಕಾರ ವಂಚನೆ ಮಾಡುವ ಕಾರ್ಖಾನೆಗಳ ಹಾಗೂ ವಿವಿಧ ಕ್ಷೇತ್ರಗಳಲ್ಲಿನ ಕಾರ್ಮಿಕರ ರಕ್ಷಣೆಗೆ ಪ್ರಭಲ ಕಾನೂನು ಜಾರಿಗೆ ತರುವ ಮೂಲಕ ಕಾರ್ಮಿಕರಿಗೆ ರಕ್ಷಣೆ ಜತೆಗೆ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವಂತೆ ಮಾಡಬೇಕು ಎಂದು ಒತ್ತಾಯಿಸಿದರು.