

ಕೆಜಿಎಫ್: ನಗರಾಭಿವೃದ್ಧಿ ಪ್ರಾಧಿಕಾರದಿಂದ ಪೊಟ್ಟೆಪಲ್ಲಿ ರಾಜೀವ್ ಗಾಂಧಿ ವಸತಿ ಬಡಾವಣೆಯ 1 ಮತ್ತು 2ನೇ ಹಂತದಲ್ಲಿನ 488 ನಿವೇಶನಗಳನ್ನು ಕಳೆದ 2024ರ ಡಿ.26 ರಂದು ನಗರಸಭೆಗೆ ಹಸ್ತಾಂತರಿಸಲಾಗಿದ್ದು, ಈ ಬಡಾವಣೆಯಲ್ಲಿನ ಖಾತೆಗಳಿಗೆ ಇ&-ಖಾತೆ ಪಡೆಯಲು ಬಾಕಿಯಿರುವ ಆಸ್ತಿ ತೆರಿಗೆ ಮತ್ತು ಖಾತೆ ಶುಲ್ಕ 600 ರೂ. ಪಾವತಿಸಿ ಇ&-ಖಾತೆ ಪಡೆಯಬಹುದು ಎಂದು ಶಾಸಕಿ ರೂಪಕಲಾ ತಿಳಿಸಿದರು.
ನಗರಸಭಾ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇ-&ಖಾತೆ ವಿಚಾರವಾಗಿ ನಗರಸಭೆಯಿಂದ ನೇಮಿಸಲ್ಪಡುವ ಅಧಿಕಾರಿ ಖಾತೆ ಶುಲ್ಕ ಕೇವಲ 600 ರೂ.ಗಳನ್ನಷ್ಟೇ ಕಟ್ಟಿಸಿಕೊಳ್ಳಬೇಕು. ಇದನ್ನು ಹೊರತುಪಡಿಸಿ ಹೆಚ್ಚಿಗೆ ಒಂದು ರೂಪಾಯಿಯನ್ನೂ ಕಟ್ಟಿಸಿಕೊಳ್ಳುವಂತಿಲ್ಲ. ಬಡಾವಣೆಯಲ್ಲಿನ 488 ಖಾತೆಗಳನ್ನೂ ಒಟ್ಟುಗೂಡಿಸಿ ಮುಂದಿನ 10 ದಿನಗಳಲ್ಲಿ ಅದೇ ಬಡಾವಣೆಗೆ ಹೋಗಿ ಇ&-ಖಾತೆ ವಿತರಿಸಲಾಗುವುದು ಎಂದರು.
ನಗರಸಭೆಯಲ್ಲಿ ಖಾತೆಗಳನ್ನು ಮಾಡಿಸುವುದಕ್ಕೆ ಬೃಹತ್ ದಂಧೆಯೇ ನಡೆಯುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಯಾವುದೇ ಕಾರಣಕ್ಕೂ ಮಧ್ಯವರ್ತಿಗಳ ಪ್ರವೇಶಕ್ಕೆ ಅವಕಾಶವಿಲ್ಲ. ಯಾರೋ 10 ರಿಂದ 30 ಸಾವಿರ ರೂ.ಗಳನ್ನು ಖಾತೆಗಾಗಿ ಕೊಡಬೇಕು ಎಂಬ ಮಾತು ಇಲ್ಲಿ ಉದ್ಭವಿಸುವುದಿಲ್ಲ ಎಂದರು.
ಕೆಲವು ಕಡೆಗಳಲ್ಲಿ ಭೂ ಪರಿವರ್ತನೆಯಾಗಿದ್ದು, ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದನೆ ಪಡೆಯದೇ ಇರುವಂತದ್ದು, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇತಿಮಿತಿಯಲ್ಲಿರುವಂತಹದ್ದು, ಇಂತಹ ನಿವೇಶನಗಳಿಗೆ ಅಕ್ರಮ ಸಕ್ರಮದಡಿಯಲ್ಲಿ ಸರ್ಕಾರದ ನೀತಿ ನಿಯಮಾವಳಿಗಳಂತೆ ಬಿ ಖಾತೆಯನ್ನು ಮಾಡಿಕೊಡಲಾಗುವುದು. ಯಾವುದೇ ಕಾರಣಕ್ಕೂ ಸರ್ಕಾರದ ನೀತಿ ನಿಯಮಗಳನ್ನು ಗಾಳಿಗೆ ತೂರುವ ಕೆಲಸ ಮಾಡುವುದಿಲ್ಲ ಎಂದರು.
ನಗರಸಭೆಯಲ್ಲಿ ಸ್ವತ್ತುಗಳಿಗೆ ಸಂಬಂಧಿಸಿದಂತೆ ದೊಡ್ಡ ದಂಧೆಯೇ ನಡೆಯುತ್ತಿದ್ದು, ಮಧ್ಯವರ್ತಿಗಳ ಮುಖಾಂತರ ಹೋದರೆ ಮಾತ್ರ ಕೆಲಸವಾಗುತ್ತದೆ. ಇಲ್ಲದೇ ಹೋದಲ್ಲಿ ಕೆಲಸವೇ ಆಗುವುದಿಲ್ಲ ಎಂದು ಆಗಿಂದ್ದಾಗ್ಗೆ ದೂರುಗಳು ಕೇಳಿಬರುತ್ತಿದೆ. ಕೆಜಿಎಫ್ನಲ್ಲಿ ನಾನು ಶಾಸಕಿಯಾಗಿರುವವರೆಗೆ ಖಾತೆಗಳಿಗೆ ಸಂಬಂಧಿಸಿದಂತೆ ಯಾವುದೇ ಕಾರಣಕ್ಕೂ ದಂಧೆಯಾಗಲು ಬಿಡುವುದಿಲ್ಲ ಎಂದರು.
ನಗರಸಭೆಯಲ್ಲಿ ಇನ್ನು ಮುಂದೆ ಒಂದೇ ಒಂದು ಖಾತೆಯ ಬಗ್ಗೆ ದೂರುಗಳೇನಾದರೂ ಕೇಳಿಬಂದಲ್ಲಿ ತಾಳ್ಮೆ ಕಳೆದುಕೊಂಡು ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದು. ಖಾತೆಯಾಗಲೀ, ಭೂ ಪರಿವರ್ತನೆ ಸಮಸ್ಯೆಯಾಗಲೀ, ಪ್ಲಾನಿಂಗ್ ಅಪ್ರೂವಲ್ ಇಲ್ಲವಾದರೂ ಬಿ ಖಾತೆಗಳನ್ನೂ ಸಹ ಸರ್ಕಾರದ ನಿಯಮಾವಳಿಗಳಂತೆ ಅತ್ಯಂತ ಪಾರದರ್ಶಕವಾಗಿ ಮಾಡಲಾಗುವುದು ಎಂದರು.
ಪೌರಾಯುಕ್ತ ಪವನ್ಕುಮಾರ್ ಮಾತನಾಡಿ, ಭೂ ಪರಿವರ್ತನೆಯಾದ ಆದರೆ ಸಕ್ಷಮ ಪ್ರಾಧಿಕಾರದಿಂದ ನಿವೇಶನ ವಿನ್ಯಾಸ ಅನುಮೋದನೆಗೊಳ್ಳದೇ ಮಾಲೀಕತ್ವ ಹೊಂದಿರುವ ಸ್ವತ್ತುಗಳು, ಕಂದಾಯ, ಕೃಷಿ ಜಮೀನು, ಗುಂಟಾ ಜಮೀನು, ಕಟ್ಟಡಗಳು, ಗ್ರಾಮ ಪಂಚಾಯಿತಿಗಳು ಪೂರ್ಣ ಮೇಲ್ದರ್ಜೆಗೇರಿದ ಅಥವಾ ಭಾಗಶ@ ವಿಲೀನಗೊಂಡ ಪಂಚಾಯಿತಿಯ ವಹಿಗಳಲ್ಲಿ ನಿರ್ವಹಿಸಿದ ಅನಧಿಕೃತ ಸ್ವತ್ತುಗಳು, ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಯಾಗದೇ ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಅನುಮೋದಿಸಿದ ವಿನ್ಯಾಸ ನಕ್ಷೆಗಳೆಲ್ಲವನ್ನೂ ಅನಧಿಕೃತ ಸ್ವತ್ತುಗಳು ಎಂದು ಪರಿಗಣಿಸಲಾಗಿದ್ದು, ಇವುಗಳಿಗೂ ಸಹ ಈಗ ಸರ್ಕಾರದ ಆದೇಶದಂತೆ ಬಿ ಖಾತೆಗಳನ್ನು ಮಾಡಲಾಗುತ್ತದೆ ಎಂದರು.