

ರಟ್ಟಿಹಳ್ಳಿ: ತಾಲೂಕಿನಾದ್ಯಂತ ನಕಲಿ ಪತ್ರಕರ್ತರ ಹಾವಳಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಪಿಎಸ್ಐ ರಮೇಶ ಪಿ.ಎಸ್. ಅವರಿಗೆ ಶನಿವಾರ ಮನವಿ ಸಲ್ಲಿಸಲಾಯಿತು.
ಸಂಘದ ತಾಲೂಕು ಅಧ್ಯಕ್ಷ ಚಿದಾನಂದ ಮಾಣೆ ಮಾತನಾಡಿ, ನಕಲಿ ಪತ್ರಕರ್ತರು ನೋಂದಣಿಯಿಲ್ಲದ ಚಾನಲ್ ಹೆಸರಿನ ಲೋಗೋಗಳನ್ನು ಹಿಡಿದು ಸರ್ಕಾರಿ ಇಲಾಖೆ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಅಲ್ಲದೆ, ಅವರನ್ನು ಬೆದರಿಸಿ ಹಣ ಸುಲಿಗೆ ಮಾಡುತ್ತಿದ್ದಾರೆ. ಇದರಿಂದ ನೈಜ ಪತ್ರಕರ್ತರ ಗೌರವಕ್ಕೆ ಧಕ್ಕೆ ಬರುತ್ತಿದೆ. ತಾಲೂಕಿನಲ್ಲಿರುವ ನಕಲಿ ಪತ್ರಕರ್ತರ ಕುರಿತು ಪೊಲೀಸ್ ಇಲಾಖೆ ಮಾಹಿತಿ ಪಡೆದು ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.
ಸಂಘದ ಕಾರ್ಯದರ್ಶಿ ಶಿವಕುಮಾರ ನಾಯಕ ಮಾತನಾಡಿ, ತಾಲೂಕಿನಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರ ಮಾಹಿತಿಯನ್ನು ಇಲಾಖೆಯ ಗಮನಕ್ಕೆ ನೀಡಲಾಗಿದ್ದು, ನಕಲಿ ಪತ್ರಕರ್ತರಿಗೆ ಕಡಿವಾಣ ಹಾಕಬೇಕು ಎಂದರು.
ಮನವಿ ಸ್ವೀಕರಿಸಿದ ಪಿಎಸ್ಐ ರಮೇಶ ಪಿ.ಎಸ್. ಮಾತನಾಡಿ, ಹಿರೇಕೆರೂರು ಮತ್ತು ರಟ್ಟಿಹಳ್ಳಿ ತಾಲೂಕಿನಲ್ಲಿ ಸರ್ಕಾರಿ ಅಧಿಕಾರಿಗಳಿಗೆ ನಿತ್ಯ ಅನೇಕ ನಕಲಿ ಪತ್ರಕರ್ತರು ಕರೆ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದೆ. ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು ಎಂದರು.
ಪತ್ರಕರ್ತರಾದ ಕರಿಯಪ್ಪ ಚೌಡಕ್ಕನವರ, ಸತೀಶ ಸರಶೆಟ್ಟರ್, ಪ್ರದೀಪ ಕುಲ್ಕರ್ಣಿ, ಪ್ರಸನ್ನ ಅಘಾನಿಶಿನಕರ ಉಪಸ್ಥಿತರಿದ್ದರು.