

ತರೀಕೆರೆ: ಪುರಸಭೆಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರು ಸಣ್ಣ ಕೆಲಸಕ್ಕೂ ಕಚೇರಿಗೆ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಪುರಸಭೆ ಸದಸ್ಯ ಟಿ.ಜಿ.ಅಶೋಕ್‌ಕುಮಾರ್ ಆರೋಪಿಸಿದರು.
ಪುರಸಭೆ ಸಭಾಂಗಣದಲ್ಲಿ ನಡೆದ ಸದಸ್ಯರ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಪುರಸಭೆಯಲ್ಲಿ ಚುನಾಯಿತ ಪ್ರತಿನಿಧಿಗಳ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಅಲ್ಲದೇ ಜನಪ್ರತಿನಿಧಿಗಳ ಮೂಲಕ ಹೋದರೆ ಯಾವುದೇ ಕೆಲಸ ಆಗುತ್ತಿಲ್ಲ. ಇನ್ನಾದರೂ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಿ ಆಯಾ ವಾರ್ಡ್‌ನ ಸದಸ್ಯರ ಮೂಲಕವೇ ಸಮಸ್ಯೆಗೆ ಪರಿಹಾರ ದೊರೆಯುವಂತಾಗಬೇಕು ಎಂದು ಒತ್ತಾಯಿಸಿದರು.
ಲೋಕೋಪಯೋಗಿ ಇಲಾಖೆ ಎಇಇ ಜಿ.ಎ.ನಾಗೇಂದ್ರಪ್ಪ ಮಾತನಾಡಿ, ಪಟ್ಟಣದಲ್ಲಿ ಹಾದು ಹೋಗಿರುವ ಬಿ.ಎಚ್.ರಸ್ತೆ ಅಭಿವೃದ್ಧಿಗೆ ಸರ್ಕಾರದಿಂದ 29.35 ಕೋಟಿ ರೂ ಮಂಜೂರಾಗಿದ್ದು, ಸದ್ಯದಲ್ಲೇ 1.5 ಕಿ.ಮೀ ಚತುಷ್ಪಥ ರಸ್ತೆ ಕಾಮಗಾರಿ ಆರಂಭವಾಗಲಿದೆ. ರಸ್ತೆ ಪಕ್ಕದ ವರ್ತಕರು, ನಿವಾಸಿಗಳಿಗೆ ತೊಂದರೆಯಾಗದಂತೆ ಕಾಮಗಾರಿ ನಡೆಸಲಾಗುವುದು ಎಂದು ಸ್ಪಷ್ಟನೆ ನೀಡಿದರು.
ಸದಸ್ಯ ಟಿ.ಎಂ.ಭೋಜರಾಜ್ ಮಾತನಾಡಿ, ಚತುಷ್ಪಥ ರಸ್ತೆ ನಿರ್ಮಾಣಕ್ಕಾಗಿ ಹಿಂದೆ ನಿಗದಿ ಮಾಡಿದ್ದ 45 ಅಡಿಗೆ ಬದಲಾಗಿ 49.5 ಅಡಿ ಜಾಗ ಹೆಚ್ಚುವರಿಯಾಗಿ ಅಗಲೀಕರಣವಾಗಲಿದೆ ಎಂಬ ಗೊಂದಲವಿದೆ. ರಸ್ತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಲೋಕೋಪಯೋಗಿ ಇಲಾಖೆ ಹಸ್ತಾಂತರವಾಗಿಲ್ಲ ಎಂಬ ಕಳವಳ ಕಾಡುತ್ತಿದೆ. ಶಾಸಕರು ಅನುದಾನ ತಂದ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಪಡೆಯುವುದನ್ನು ಬಿಟ್ಟು ಸಾರ್ವಜನಿಕರಿಗೆ ಸ್ಪಷ್ಟನೆ ನೀಡಿ ಕಾಮಗಾರಿ ಆರಂಭಿಸಬೇಕು ಎಂದರು.
ಸಭೆಯಲ್ಲಿ ಉಪಾಧ್ಯಕ್ಷೆ ಎಂ.ಗಿರಿಜಾ, ಸದಸ್ಯರಾದ ಟಿ.ಎಂ.ರಂಗನಾಥ್, ಟಿ.ಆರ್.ಚಂದ್ರಶೇಖರ್, ಪಾರ್ವತಮ್ಮ, ಚೇತನ್, ಕಮಲ, ಟಿ.ಜಿ.ಲೋಕೇಶ್, ಮುಖ್ಯಾಕಾರಿ ಎಚ್.ಪ್ರಶಾಂತ್, ವ್ಯವಸ್ಥಾಪಕ ವಿಜಯಕುಮಾರ್ ಇದ್ದರು.