

ಮುಳಗುಂದ: ಪಟ್ಟಣದಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು ಅವುಗಳಿಂದ ಉಂಟಾಗುವ ಸಮಸ್ಯೆ ಪರಿಹಾರಕ್ಕಾಗಿ ಕೊಂಡವಾಡ ನಿರ್ಮಿಸಬೇಕು ಎಂದು ಆಗ್ರಹಿಸಿ ಸಾರ್ವಜನಿಕರು ಪಪಂ ಮುಖ್ಯಾಧಿಕಾರಿ ಮಂಜುನಾಥ ಗುಳೇದ ಅವರಿಗೆ ಮನವಿ ಸಲ್ಲಿಸಿದರು.
ಈ ಹಿಂದೆ ಪಟ್ಟಣದಲ್ಲಿ ಕೊಂಡವಾಡವಿತ್ತು. ಕ್ರಮೇಣ ಅದು ನಿರುಪಯುಕ್ತ ವಾಗಿದ್ದರಿಂದ ಅದನ್ನು ತೆಗೆದುಹಾಕಲಾಗಿದೆ. ಬಿಡಾಡಿ ದನಗಳ ಹಾವಳಿಯಿಂದಾಗಿ ರೈತರು ಬೆಳೆ ಉಳಿಸಿಕೊಳ್ಳಲು ಹರಸಾಹಸ ಮಾಡುವಂತಾಗಿದೆ. ಅಲ್ಲದೆ, ಈ ಜಾನುವಾರುಗಳು ರಸ್ತೆ ಮಧ್ಯೆ ನಿಲ್ಲುವುದು, ಅಲ್ಲಿಯೇ ಮಲಗುವುದರಿಂದ ಸವಾರರಿಗೆ ಕಿರಿಕಿರಿಯಾಗಿ ಪರಿಣಮಿಸಿದೆ.
ಈ ಬಿಡಾಡಿ ದನಗಳ ಜತೆಗೆ ಕೆಲ ರೈತರು ತಮ್ಮ ದನಕರುಗಳನ್ನು ಬೀದಿಯಲ್ಲಿ ಬಿಟ್ಟು ಅವು ಬೆಳೆದ ನಂತರ ಅದನ್ನು ಮಾರಾಟ ಮಾಡುತ್ತಿದ್ದಾರೆ. ಪಪಂನವರು ಅದಕ್ಕೆ ಕಡಿವಾಣ ಹಾಕಬೇಕು ಎಂದು ಮಹಾಂತೇಶ ಕಣವಿ ಇತರರು ಆಗ್ರಹಿಸಿದ್ದಾರೆ.