

ವಿಜಯಪುರ: ಮೈಕ್ರೋಫೈನಾನ್ಸ್ ಹಾವಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕರ್ನಾಟಕ ಕಿರುಸಾಲ ಮತ್ತು ಸಣ್ಣ ಸಾಲ ಆಧ್ಯಾದೇಶ-2025ರ ಅಧಿಸೂಚನೆ ಪ್ರಕಟಗೊಳಿಸಿದ ಬೆನ್ನಲ್ಲೇ ಪೊಲೀಸ್ ಇಲಾಖೆ ವ್ಯಾಪಕ ಕಾರ್ಯಾಚರಣೆ ನಡೆಸಿ ಹಲವರ ಮೇಲೆ ಪ್ರಕರಣ ದಾಖಲಿಸಿದೆ.
ಕಳೆದ ಎರಡು ದಿನಗಳಿಂದ ಜಿಲ್ಲೆಯ 25 ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿರುವ ಪೊಲೀಸರು ಒಟ್ಟು 104 ಜನರನ್ನು ವಿಚಾರಣೆಗೊಳಪಡಿಸಿದ್ದಾರೆ. ಆ ಪೈಕಿ 37 ಜನರ ಹತ್ತಿರ ಅನಧಿಕೃತ ಲೇವಾದೇವಿಗೆ ಸಂಬಂಧಿಸಿದ ನಗದು ಹಣ, ಖಾಲಿ ಬಾಂಡ್, ಚೆಕ್, ಕೈಗಡ ಪತ್ರ, ಪಹಣಿ ಪತ್ರಗಳು, ಬ್ಯಾಂಕ್ ಪಾಸ್‌ಬುಕ್‌ಗಳು ಸೇರಿದಂತೆ ಇತರೆ ದಾಖಲಾತಿಗಳು ದೊರೆತಿವೆ.
ಖಾಲಿ ಬಾಂಡ್- 489, ಖಾಲಿ ಚೆಕ್- 285, ಪಾಸ್ ಬುಕ್- 95, ಕರಾರು ಪತ್ರ- 26, ಪಹಣಿ ಉತಾರೆ- 26, ಹಕ್ಕು ಪತ್ರ-16, ಇಸಾರ ಪತ್ರ-15, ಖರೀದಿ ಪತ್ರ-13, ಆಧಾರ್ ಕಾರ್ಡ್- 14, ಮೋಬೈಲ್- 12, ಬಕ್ಷೀಸ್ ಪತ್ರ- 5, ಕೈಗಡ ಪತ್ರ-3, ಒಪ್ಪಿಗೆ ಪತ್ರ- 5, ಜಮೀನು ಖರೀದಿ ಪತ್ರ-2, ಎಟಿಎಂ-2, ಡೆಬಿಟ್ ಕಾರ್ಡ್- 2, ಒತ್ತಿ ಪತ್ರ-1, ನೋಂದಣಿ ಪತ್ರ-1, ನಗದು ಹಣ- 62,29,000ರೂ, ಬಂಗಾರದ ಆಭರಣಗಳು- 55 ಗ್ರಾಂ, ಇತರೆ ವಸ್ತುಗಳು-154 ವಶಕ್ಕೆ ಪಡೆಯಲಾಗಿದೆ. ವಶಪಡಿಸಿಕೊಂಡ ದಾಖಲಾತಿಗಳನ್ನು ಮುಂದಿನ ಕ್ರಮಕ್ಕಾಗಿ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸುವುದಾಗಿ ಎಸ್‌ಪಿ ಲಕ್ಷ್ಮಣ ನಿಂಬರಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.