

ಪಾವಗಡ: ಮಣ್ಣು ದಂಧೆ, ರೇಷನ್ ಕಾರ್ಡ್ ರದ್ದತಿ ವಿರೋಧಿಸಿ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳ ಸೋಮವಾರ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಕಾನೂನು ಕ್ರಮವಹಿಸುವಂತೆ ತಹಸೀಲ್ದಾರ್ ವರದರಾಜು ಅವರಿಗೆ ಮನವಿ ಸಲ್ಲಿಸಿದರು.
ರೈತ ಸಂಘ, ಹಸಿರು ಸೇನೆ ಜಿಲ್ಲಾಧ್ಯಕ್ಷ ಪೂಜಾರಪ್ಪ ಮಾತನಾಡಿ, ಪಟ್ಟಣದ ಸಮೀಪದ ಕಣಿವೇನಹಳ್ಳಿ ಸರ್ವೇ ನಂ.114ರ ಕರಿಬೆಟ್ಟದ ಪಾತ್ರದಲ್ಲಿ ಕೆಲವರು ಅಕ್ರಮವಾಗಿ ಲೇಔಟ್ ಮಾಡಲು ಮಣ್ಣು ತೆಗೆದು ಸಾಗಿಸುತ್ತಿದ್ದಾರೆ. ಈ ಬಗ್ಗೆ ತಾಲೂಕು ಆಡಳಿತ ಕೂಡಲೇ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ಮಣ್ಣು ಅಕ್ರಮ ಸಾಗಣೆಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು. ಬೆಟ್ಟದ ಬುಡದಲ್ಲಿ ಅಲ್ಪಸಂಖ್ಯಾತ ಮಹಿಳಾ ವಸತಿ ಶಾಲೆಯಿದ್ದು, ಮಣ್ಣು ಅಗೆಯುವುದರಿಂದ ಬೆಟ್ಟ ಕುಸಿಯುವ ಸಂಭವ ಹೆಚ್ಚಿದೆ. ತಾಲೂಕಿನ ಗುಂಡ್ಲಹಳ್ಳಿ ದೊಡ್ಡಕೆರೆಯಲ್ಲಿಯೂ ಮಣ್ಣು ದಂಧೆ ಶುರುವಾಗಿದೆ ತಾಲೂಕಿನಲ್ಲಿ 38 ದೊಡ್ಡ ಕೆರೆಗಳಿದ್ದು, ಕಟ್ಟೆಗಳು ಹಾಗೂ ಕೋಡಿಗಳು ಶಿಥಿಲಗೊಂಡಿವೆ. ಕೆರೆಗಳ ದುರಸ್ತಿಗೆ ತಾಲೂಕು ಆಡಳಿತ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು. ಮನವಿ ಸ್ವೀಕರಿಸಿದ ತಹಸೀಲ್ದಾರ್ ವರದರಾಜು, ಮಣ್ಣು ದಂಧೆ ಸಂಬಂಧಿಸಿದಂತೆ ಕ್ರಮವಹಿಸಲಾಗುವುದು ಎಂದರು. ಮುಖಂಡರಾದ ಈ.ಸಿದ್ದಪ್ಪ, ಗುಂಡ್ಲಹಳ್ಳಿ ರಮೇಶ್, ರಾಮಾಂಜಿ, ನಾರಾಯಣಪ್ಪ, ಯುವ ಘಟಕ ಶಿವು ಬ್ಯಾಡನೂರು, ಅಂಜಿನಪ್ಪ ಇದ್ದರು.