

ವಿಜಯಪುರ: ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದನೆ ಪಡೆಯದೆ ಕೆಲ ಭೂ ಮಾಲೀಕರು ತಮ್ಮ ಶೇತ್ಕಿ ಜಮೀನುಗಳನ್ನು ಖಾಸಗಿಯಾಗಿ ವಿಭಾಗಿಸಿ ಗುಂಟೆವಾರು ನಿವೇಶನಗಳನ್ನು ರಚಿಸಿ ಮಾರಾಟ ಮಾಡುವುದು ನಿಯಮ ಬಾಹಿರವಾಗಿದ್ದು, ಈ ರೀತಿಯ ಅನಧಿಕೃತ ಗುಂಟಾ ನಿವೇಶನಗಳ ನಿರ್ಮಾಣದ ಕಡಿವಾಣಕ್ಕೆ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚಿಸಿದರು.
ನಗರದ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ‘ಸ್ಥಳೀಯ ಯೋಜನಾ ಪ್ರದೇಶಕ್ಕೆ ಸರ್ಕಾರದಿಂದ ಅನುಮೋದನೆಯಾದ ಮಹಾಯೋಜನೆಯಲ್ಲಿ ಪ್ರಸ್ತಾಪಿಸಿರುವ ರಸ್ತೆಗಳಲ್ಲಿ ನಿವೇಶನ-ಕಟ್ಟಡಗಳನ್ನು ಹಾಗೂ ಅನಧಿಕೃತ ಗುಂಟಾ ನಿವೇಸನ ರಚನೆ ತಡೆಗಟ್ಟುವ ಕುರಿತ ಸಭೆ’ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗುಂಟಾ ನಿವೇಶನ ಮಾಡುವ ಭೂ ಮಾಲೀಕರಿಗೆ ಹಲವು ಬಾರಿ ತಿಳಿವಳಿಕೆ ನೀಡಿದರೂ ಗುಂಟಾ ನಿವೇಶನ ರಚನೆ ಕಂಡು ಬಂದಿದ್ದು, ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮ ವಹಿಸುವಂತೆ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅನಧಿಕೃತವಾಗಿ ನಿರ್ಮಾಣಗೊಂಡ ಬಡಾವಣೆಗಳ ನಿವೇಶನಗಳಿಗೆ ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ವತಿಯಿಂದ ನೀರಿನ ಸಂಪರ್ಕ, ಹೆಸ್ಕಾಂ ವತಿಯಿಂದ ವಿದ್ಯುತ್ ಸಂಪರ್ಕ ಅಳವಡಿಸದೇ ತಡೆಹಿಡಿಯಬೇಕು. ಸಮರ್ಪಕ ದಾಖಲೆಗಳಿದ್ದರೆ ಮಾತ್ರ ಸೌಲಭ್ಯಗಳನ್ನು ಒದಗಿಸಲು ಕ್ರಮ ವಹಿಸಬೇಕು. ಸಾರ್ವಜನಿಕರು ಸಹ ದಾಖಲೆ ಇಲ್ಲದ ಅನಧಿಕೃತ ಗುಂಟಾ ನಿವೇಶನ ಖರೀದಿ ಮಾಡದೇ ನಗರ ಅಭಿವೃದ್ಧಿಗೆ ಸಹಕರಿಸುವಂತೆ ಅವರು ಮನವಿ ಮಾಡಿದರು.
ಸರ್ಕಾರದಿಂದ ಅನುಮೋದನೆಯಾದ ಮಹಾಯೋಜನೆಯ ರಸ್ತೆಗಳ ಸಮೀಕ್ಷೆ ನಡೆಸಿ, ಅತಿಕ್ರಮಣವಾದ ಜಾಗ ತೆರವುಗೊಳಿಸಿ ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಮಹಾನರ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದ ಅವರು, ನಗರದ ವಿವಿಧೆಡೆ ರಸ್ತೆಗಳ ಮೇಲೆ ಅನಧಿಕೃತವಾಗಿ ನಿವೇಶನ ಹಾಗೂ ಕಟ್ಟಡಗಳನ್ನು ರಚಿಸುತ್ತಿರುವುದು ಕಂಡು ಬಂದಿದ್ದು, ಕೂಡಲೇ ತಡೆಗಟ್ಟಿ ಈ ಜಾಗವನ್ನು ತೆರವುಗೊಳಿಸುವ ಮೂಲಕ ಅತಿಕ್ರಮಣವಾಗದಂತೆ ನೋಡಿಕೊಳ್ಳಬೇಕು. ವಿಜಯಪುರ ನಗರದ ಯೋಜನಾ ಪ್ರದೇಶಕ್ಕೆ ಸರ್ಕಾರದಿಂದ ಅನುಮೋದನೆಯಾದ ಮಹಾಯೋಜನೆಯ ರಸ್ತೆಗಳ ಮೇಲೆ ಅನಧಿಕೃತವಾಗಿ ನಿವೇಶನ ಹಾಗೂ ಕಟ್ಟಡಗಳು ನಿರ್ಮಾಣವಾಗದಂತೆ ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು.
ಎಸ್‌ಪಿ ಋಷಿಕೇಷ ಸೋನಾವಣೆ, ಎಡಿಸಿ ಸೋಮಲಿಂಗ ಗೆಣ್ಣೂರ, ಎಎಸ್‌ಪಿ ಶಂಕರ ಮಾರಿಹಾಳ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ರಾಜಶೇಖರ ಡಂಬಳ, ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ವಿಜಯಪುರ ಉಪವಿಭಾಗಾಧಿಕಾರಿ ಬಸವಣೆಪ್ಪ ಕಲಶೆಟ್ಟಿ, ಇಂಡಿ ಉಪವಿಭಾಗಾಧಿಕಾರಿ ಆಬೀದ ಗದ್ಯಾಳ ಮತ್ತಿತರರಿದ್ದರು.