

ಮೈಸೂರು: ಸುಳ್ಳು ಸುದ್ದಿ ಉತ್ಪಾದನಾ ಕಾರ್ಖಾನೆಗಳಿಗೆ ಕಡಿವಾಣ ಹಾಕಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಜಿಲ್ಲಾ ಪತ್ರಕರ್ತರ ಸಂಘದಿಂದ ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ವೇಗವಾಗಿ ಹರಡುವ ಫೇಕ್‌ನ್ಯೂಸ್‌ಗಳನ್ನು ತಡೆಯದಿದ್ದರೆ ಪ್ರಜಾಪ್ರಭುತ್ವ, ಸಂವಿಧಾನ ಮತ್ತು ಸಾಮಾಜಿಕ ಮೌಲ್ಯಗಳು ಉಳಿಯಲ್ಲ. ಧಾರ್ಮಿಕ, ಸಾಮಾಜಿಕ ವಿಷಯದಲ್ಲಿ ಘರ್ಷಣೆ ಉಂಟು ಮಾಡಲಾಗುತ್ತಿದೆ. ಇದರಿಂದ ಸಮಾಜಕ್ಕೆ ದೊಡ್ಡ ಹಾನಿಯಾಗುತ್ತಿದೆ. ಕುವೆಂಪು ಹೇಳಿದಂತೆ ಸಮಾಜವು ‘ಸರ್ವ ಜನಾಂಗದ ಶಾಂತಿಯ ತೋಟ’ವಾಗಿಯೂ ಉಳಿಸಿಕೊಳ್ಳುವುದು ಕಷ್ಟಕರವಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕದಿದ್ದರೆ ಸಮಾಜದ ಪ್ರತಿಯೊಬ್ಬರ ನೆಮ್ಮದಿ ಹಾಳಾಗುತ್ತದೆ. ಯಾರೊಬ್ಬರೂ ನೆಮ್ಮದಿಯಾಗಿ ಬದುಕಲು ಸಾಧ್ಯವಾಗಲ್ಲ ಎಂದು ಎಚ್ಚರಿಸಿದರು.
ಸುಳ್ಳು ಸುದ್ದಿಗಳ ಅನಾಹುತಗಳಿಗೆ ಉದಾಹರಣೆ ನೀಡಿದ ಸಿಎಂ, ‘ಸಾಲ ಮನ್ನಾ ಮಾಡೋದಕ್ಕೆ ನಮ್ಮ ಬಳಿ ಪ್ರಿಂಟಿಂಗ್ ಮಷಿನ್ ಇದೆಯಾ’ ಎಂದು ಬಿ.ಎಸ್.ಯಡಿಯೂರಪ್ಪ ಅವರು ಸದನದಲ್ಲೇ ಹೇಳಿದ್ದರು. ಈ ಮಾತನ್ನು ನಾನು ಉಲ್ಲೇಖಿಸಿದ್ದೆ. ಆದರೆ ಸಾಮಾಜಿಕ ಜಾಲ ತಾಣಗಳಲ್ಲಿ ನಾನೇ ಆ ಮಾತು ಹೇಳಿದ್ದಾಗಿ ನಕಲಿ ಸುದ್ದಿ ಸೃಷ್ಟಿಸಿ, ಅದಕ್ಕೆ ಗ್ಯಾರಂಟಿ ಯೋಜನೆಗಳನ್ನು ಜೋಡಿಸಿ ತಪ್ಪು ಸಂದೇಶ ಹರಡಿದರು. ಇದರಿಂದ ನಷ್ಟ ಆಗಿದ್ದು ಸಮಾಜಕ್ಕೆ ಹೊರತು ನನಗಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಫೇಕ್ ನ್ಯೂಸ್ ಸೃಷ್ಟಿಕರ್ತರಿಗೆ ಕಠಿಣ ಶಿಕ್ಷೆ ಕೊಡಿಸುವ ನಿಟ್ಟಿನಲ್ಲಿ ಕಾನೂನು ಮಾಡಲಾಗಿದೆ. ಆದರೆ, ಕೇವಲ ಕಾನೂನಿನಿಂದ ಮಾತ್ರ ಫೇಕ್ ನ್ಯೂಸ್ ತಡೆಯಲು ಸಾಧ್ಯವಿಲ್ಲ. ಇಡೀ ಸಮಾಜ ಇದರ ವಿರುದ್ಧ ಧ್ವನಿ ಎತ್ತಿದರೆ ಮಾತ್ರ ಸಾಧ್ಯ ಎಂದರು.
ವಾಕ್ ಸ್ವಾತಂತ್ರ್ಯ ನಮಗೆ ನಮ್ಮ ಸಂವಿಧಾನ ನೀಡಿರುವ ಅತ್ಯುನ್ನತ ಮೌಲ್ಯ. ಸಂವಿಧಾನದ ಮೂರು ಅಂಗಗಳಿಗೆ ಅಪಾಯ ಬಂದರೆ ಸಮಾಜಕ್ಕೆ ಅಪಾಯ ಬಂದಂತೆ. ವಾಕ್ ಸ್ವಾತಂತ್ರ್ಯ ಆಚರಿಸುವ ಪತ್ರಿಕಾ ರಂಗಕ್ಕೆ ಯಾವ ನಿರ್ಬಂಧಗಳೂ ಇರಬಾರದು ಎನ್ನುವುದನ್ನು ಪಂಡಿತ್ ನೆಹರು ಅವರೂ ಬಹಳ ಒತ್ತಿ ಹೇಳಿದ್ದರು. ಪತ್ರಿಕಾ ಸ್ವಾತಂತ್ರೃಕ್ಕೆ ಧಕ್ಕೆಯಾದರೆ ಪ್ರಜಾಪ್ರಭುತ್ವಕ್ಕೂ ಆಪತ್ತು ಬರಲಿದೆ ಎಂದು ವಿವರಿಸಿದರು.
ಹಿರಿಯ ಪತ್ರಕರ್ತರನ್ನು ಅಭಿನಂದಿಸಿ, ವಾರ್ಷಿಕ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ, ಶಾಸಕರಾದ ತನ್ವೀರ್ ಸೇಠ್, ಡಿ.ರವಿಶಂಕರ್, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ಪ್ರಜಾವಾಣಿ ಪತ್ರಿಕೆ ಸಂಪಾದಕ ರವೀಂದ್ರ ಭಟ್, ನ್ಯೂಸ್ ಫಸ್ಟ್ ಸಿಇಒ ರವಿಕುಮಾರ್, ಜಿಎಸ್‌ಎಸ್ ಸಂಸ್ಥೆಯ ಮುಖ್ಯಸ್ಥ ಶ್ರೀಹರಿ ಇತರರು ಇದ್ದರು.