

ಮದ್ದೂರು : ತಾಲೂಕಿನಾದ್ಯಂತ ಲೈಸನ್ಸ್ ಪಡೆಯದೆ ಕೆಲವರು ಎಳನೀರು ವ್ಯಾಪಾರವನ್ನು ಅನಧಿಕೃತವಾಗಿ ರಸ್ತೆ ಬದಿಯಲ್ಲಿ ನಡೆಸುತ್ತಿರುವುದು ಎಪಿಎಂಸಿ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದ್ದು, ಈ ಸಂಬಂಧ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಎಳನೀರು ವರ್ತಕರು ಪಟ್ಟಣದ ಎಪಿಎಂಸಿ ಕಚೇರಿಯಲ್ಲಿ ಕಾರ್ಯದರ್ಶಿ ಲತಾಕುಮಾರಿ ಅವರಿಗೆ ಮನವಿ ಸಲ್ಲಿಸಿದರು.
ವರ್ತಕರ ಸಂಘದ ತಾಲೂಕು ಅಧ್ಯಕ್ಷ ಸಿ.ಎಚ್.ರವಿ ಚನ್ನಸಂದ್ರ ಮಾತನಾಡಿ, ಎಳನೀರು ವರ್ತಕರು ಲೈಸನ್ಸ್ ಪಡೆದು ಪಟ್ಟಣದ ಎಳನೀರು ಮಾರುಕಟ್ಟೆಯ ಪ್ರಾಂಗಣದಲ್ಲಿ ವ್ಯಾಪಾರ ನಡೆಸುತ್ತಿದ್ದು, ಪ್ರಾಂಗಣಗಳಿಗೆ ಎಳನೀರು ಬರದೆ ವರ್ತಕರಿಗೆ ತುಂಬ ತೊಂದರೆಯಾಗುತ್ತಿದೆ. ಎಲ್ಲ ಎಪಿಎಂಸಿ ಪ್ರಾಂಗಣಗಳಲ್ಲಿ ಮಾತ್ರ ವ್ಯಾಪಾರ ನಡೆಸಲು ಕಾನೂನು ಕ್ರಮ ಜರುಗಿಸಬೇಕು. ಅನಧಿಕೃತ ವ್ಯಾಪಾರಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.
ಜು.30 ರಂದು ಮಧ್ಯಾಹ್ನ 12.30 ಕ್ಕೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸಭಾಂಗಣದಲ್ಲಿ ಈ ಸಂಬಂಧ ಉಪ ನಿರ್ದೇಶಕರು ಸಭೆ ಕರೆದಿದ್ದು, ಸಮಿತಿಯಲ್ಲಿ ಲೈಸನ್ಸ್ ಪಡೆದು ವ್ಯವಹರಿಸುತ್ತಿರುವ ಎಲ್ಲ ವರ್ತಕರು ಹೆಚ್ಚಿನ ಸಂಖ್ಯೆಯಲ್ಲಿ ಸಭೆಗೆ ಆಗಮಿಸುವಂತೆ ಮನವಿ ಮಾಡಿದರು.
ವರ್ತಕರ ಸಂಘದ ಉಪಾಧ್ಯಕ್ಷ ಉಮೇಶ್, ಕಾರ್ಯದರ್ಶಿ ಎ.ರಾಜ, ನಿರ್ದೇಶಕರಾದ ಶಿವರಾಜು, ಶಿವಣ್ಣ, ಯೋಗೇಶ್, ಮಲ್ಲರಾಜು, ಪ್ರಸನ್ನ, ತಮ್ಮಯ್ಯ, ಸುನಿಲ್, ವಿಜಯ್, ಶಿವು, ಹೊನ್ನೇಶ್, ಕೃಷ್ಣ, ಕುಮಾರ್ ಹಾಗೂ ಸೋಮಶೇಖರ್ ಇದ್ದರು.