ಮುಳಬಾಗಿಲು: ನೋಂದಣಿಯಾಗುವ ಪ್ರತಿ ಜಮೀನಿನ ದಾಖಲೆಗಳನ್ನು ಆಯಾ ತಾಲೂಕಿನ ನೋಂದಣಾಧಿಕಾರಿ ಪರೀಶೀಲನೆ ಮಾಡಲು ಅಧಿಕಾರ ನೀಡಿ ಭೂಗಳ್ಳರಿಂದ ಸರ್ಕಾರಿ ಕೆರೆ, ಗೋಮಾಳ,ರಾಜಕಾಲುವೆಗಳ ಅಕ್ರಮ ನೋಂದಣಿಗೆ ಕಡಿವಾಣ ಹಾಕಬೇಕೆಂದು ರೈತ ಸಂಘದಿಂದ ಉಪ ನೋಂದಣಾಧಿಕಾರಿ ಮಂಜುಳಾ ಮೂಲಕ ಕಂದಾಯ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಎಲ್ಲ ದಾಖಲೆಗಳನ್ನು ಕ್ರಮಬದ್ಧವಾಗಿ ಕಾನೂನಿನ ಪ್ರಕಾರ ಪರೀಶೀಲನೆ ಮಾಡಿದರೂ ಭೂಗಳ್ಳರು ಸರ್ಕಾರಿ ಹಾಗೂ ಅಮಾಯಕರ ಆಸ್ತಿ ನೋಂದಣಿ ಮಾಡಿ ಕಾನೂನು ಉಲ್ಲಂನೆ ಮಾಡಿರುವ ಸಾವಿರಾರು ಪ್ರಕರಣಗಳು ಕಣ್ಣುಮುಂದೆ ಇದ್ದರೂ ಸಹ ಪರಿಶೀಲನೆ ಮಾಡಲು ಸಾಧ್ಯವಾಗುತ್ತಿಲ್ಲ. ದಾಖಲೆಗಳ ಪರೀಶೀಲನೆ, ನೋಂದಣಿ ಮಾಡುವ ಅಧಿಕಾರ ಅಧಿಕಾರಿಗಳಿಗೆ ಇಲ್ಲ ಎಂಬ ಆದೇಶದಿಂದ ಸರ್ಕಾರವೇ ಸರ್ಕಾರಿ ಭೂಮಿ ಕಬಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ರೈತ ಸಂದ ಉಪಾಧ್ಯ ಕೆ.ನಾರಾಯಗೌಡ ಆಕ್ರೋಶ ವ್ಯಕ್ತಪಡಿಸಿದರು.
ಮುಖಂಡ ಪಾರುಕ್ಪಾಷಾ ಮಾತನಾಡಿ, ಖಾಲಿ ಸೈಟುಗಳಿಗೆ ವಾರಸುದಾರರು ಇಲ್ಲದ, ವೃದ್ಧರು, ವಿಧವೆಯರು, ವಿದೇಶದಲ್ಲಿರುವ ಅಮಾಯಕರ ಆಸ್ತಿ ಕಬಳಿಕೆ ಜತೆಗೆ ಕೆರೆ&ರಾಜಕಾಲುವೆ, ಗೋಮಾಳ, ಗುಂಡು ತೋಪುಗಳಿಗೆ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಲಾಗುತ್ತಿದೆ. ಇಂಥವರನ್ನು ಶಿಕ್ಷಿಸುವವರು ಯಾರು?, ಯಾರ ಕೈಯಲ್ಲಿ ಸರ್ಕಾರಿ ಆಸ್ತಿ ಉಳಿಸುವ ಅಧಿಕಾರ ಇದೆ. ಸರ್ಕಾರವೇ ನೇರವಾಗಿ ಭೂಗಳ್ಳರಿಗೆ ನಕಲಿ ದಾಖಲೆ ಸೃಷ್ಟಿಸಲು ಕಂದಾಯ ಸರ್ವೇ ಅಧಿಕಾರಿಗಳಿಗೆ ಕುಮ್ಮಕ್ಕು ನೀಡಿರುವುದು ದುರಾದೃಷ್ಟಕರ ಎಂದು ಆಪಾದಿಸಿದರು.