

ಶ್ರೀರಂಗಪಟ್ಟಣ: ತಾಲೂಕಿನಲ್ಲಿ ಅಕ್ರಮ ಗಣಿಗಾರಿಕೆ ಮತ್ತೆ ತಲೆಎತ್ತಿದ್ದು ಈ ಬಗ್ಗೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಪ್ರಗತಿಪರ ಸಂಘಟನೆಗಳ ಮುಖಂಡರು ಪೊಲೀಸ್ ಇಲಾಖೆ ಅಧೀಕ್ಷಕರ ಕಚೇರಿಗೆ ಮುತ್ತಿಗೆ ಹಾಕಿ ಡಿವೈಎಸ್ಪಿ ಎಚ್.ಎಸ್.ಮುರುಳಿ ಅವರನ್ನು ತರಾಟೆಗೆ ತೆಗೆದುಕೊಂಡರು.
ಪಟ್ಟಣದ ಟೌನ್ ಠಾಣೆಯ ಆವರಣದಲ್ಲಿನ ಕಚೇರಿಗೆ ಬುಧವಾರ ರೈತ ಸಂಘ ಹಾಗೂ ದಲಿತ ಸಂಘರ್ಷ ಸಮಿತಿ ಮುಖಂಡರು, ಕಾರ್ಯಕರ್ತರು ಮುತ್ತಿಗೆ ಹಾಜಿ ಅಕ್ರಮ ಗಣಿಗಾರಿಕೆ ಹಾಗೂ ಎಗ್ಗಿಲ್ಲದೆ ಸಿಡಿಸುತ್ತಿರುವ ಬಾಂಬ್ ಬ್ಲಾಸ್ಟಿಂಗ್ ಕೃತ್ಯಕ್ಕೆ ಕಡಿವಾಣ ಹಾಕುವಂತೆ ಆಗ್ರಹಿಸಿದರು.
ರೈತ ಮುಖಂಡರಾದ ಮಂಜೇಶ್‌ಗೌಡ ಮಾತನಾಡಿ, ತಾಲೂಕಿನ ಟಿ.ಎಂ.ಹೊಸೂರು ಹಾಗೂ ಮುಂಡುಗದೊರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 2019ರಲ್ಲಿ ವಿವಿಧ ಇಲಾಖೆ ಅಧಿಕಾರಗಳನ್ನು ಒಳಗೊಂಡ ಟಾಸ್ಕ್‌ಫೋರ್ಸ್ ಕದ್ದುಮುಚ್ಚಿ ನಡೆಸುತ್ತಿದ್ದ ಅಕ್ರಮ ಕಲ್ಲು ಗಣಿಗಾರಿಕೆ ಮೇಲೆ ದಾಳಿ ಮಾಡಿ ಅವುಗಳನ್ನು ಸ್ಥಗಿತಗೊಳಿಸಿತ್ತು. ಆದರೆ ಇತ್ತೀಚೆಗೆ ಕೆಲ ಪ್ರಭಾವಿ ಗಣಿಧಣಿಗಳು ರಾಜರೋಷವಾಗಿಯೇ ಅರಣ್ಯಭೂಮಿ ಹಾಗೂ ಸರ್ಕಾರಿ ಗೋಮಾಳದಲ್ಲಿ ಗಣಿಗಾರಿಕೆ ನಡೆಸುತ್ತಿದ್ದು, ಕಾನೂನಿನ ನಿಯಮಗಳನ್ನು ಗಾಳಿಗೆ ತೂರಿ ಎಗ್ಗಿಲ್ಲದೆ ಅಕ್ರಮವಾಗಿ ಸ್ಫೋಟಕಗಳನ್ನು ಬಳಸಿ ಕಲ್ಲುಬಂಡೆಗಳನ್ನು ಸಿಡಿಸುತ್ತಿದ್ದಾರೆ. ಪೊಲೀಸ್ ಇಲಾಖೆ ಇಂತಹ ಪ್ರಕರಣಗಳನ್ನು ಪರಿಶೀಲಿಸಿ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.
ಮನವಿ ಆಲಿಸಿದ ಡಿವೈಎಸ್ಪಿ ಎಚ್.ಎಸ್.ಮುರುಳಿ ಅವರು ಪ್ರತಿಕ್ರಿಯಿಸಿ ಗಣಿಗಾರಿಕೆ ನಮ್ಮ ಇಲಾಖೆಗೆ ಬರುವುದಿಲ್ಲ. ಗಣಿ ಮತ್ತು ಭೂ ವಿಜ್ಞಾನ ಹಾಗೂ ಅರಣ್ಯ ಇಲಾಖೆಗೂ ಒಳಪಡುತ್ತದೆ. ನಮ್ಮ ಕೆಲಸ ನಮಗೆ ಗೊತ್ತಿದೆ ಎಂದು ಹೋರಾಟಗಾರರ ವಿರುದ್ಧ ಹಾರಿಕೆ ಉತ್ತರ ನೀಡಿದ ವೇಳೆ ರೈತ ಮುಖಂಡ ನಾಗೇಂದ್ರ ಸ್ವಾಮಿ ಅಧಿಕಾರಿಯ ಮಾತನ್ನು ಖಂಡಿಸಿದರು. ಇದರಿಂದ ಕೆಲ ನಿಮಿಷ ಡಿವೈಎಸ್ಪಿ ಹಾಗೂ ರೈತ ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು. ಬಳಿಕ ಹೋರಾಟಗಾರರ ಮನವಿಯನ್ನು ಗಂಭೀರವಾಗಿ ಪರಿಗಣಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಹೋರಾಟಗಾರರು ಶಾಂತರಾಗಿ ಪ್ರತಿಭಟನೆ ಕೈಬಿಟ್ಟರು.