

ಬೆಳಗಾವಿ: ಬದುಕಿನಲ್ಲಿ ಕಲಿತ ಒಳ್ಳೆಯ ವಿಚಾರಗಳನ್ನು ನಾಡಿಗೆ ಸಮರ್ಪಿಸಿ ಹೋಗಬೇಕು. ನಡೆನುಡಿಗಳಲ್ಲಿ ಸುಸಂಸ್ಕೃತಿ ಇರಬೇಕು ಎಂದು ಚಿತ್ರನಟ ಸುಚೇಂದ್ರ ಪ್ರಸಾದ ಹೇಳಿದರು.
ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪಂಡಿತ್ ದೀನದಯಾಳ್ ಉಪಾಧ್ಯಾಯ ಅಧ್ಯಯನ ಪೀಠದಿಂದ ಬುಧವಾರ ವಿಶ್ವವಿದ್ಯಾಲಯದ ಕುವೆಂಪು ಸಭಾಂಗಣದಲ್ಲಿ ಆಯೋಜಿಸಿದ್ದ ಪಂಡಿತ್ ದೀನದಯಾಳ್ ಉಪಾಧ್ಯಾಯರ 108ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಸಿ.ಎಂ. ತ್ಯಾಗರಾಜ ಮಾತನಾಡಿ, ಪಂಡಿತ್ ದೀನದಯಾಳ್ ಉಪಾಧ್ಯಾಯರ ಜೀವನ ಎಲ್ಲರಿಗೂ ಆದರ್ಶವಾಗಿದೆ. ಶಿಕ್ಷಣ ಸರ್ವರ ಪಾಲಿನ ಭಾಗ್ಯವಾಗಬೇಕು. ಶಿಕ್ಷಣ ಬದುಕು ರೂಪಿಸುವ ಶಕ್ತಿಯೂ ಆಗಬೇಕು ಎಂದರು. ಕುಲಸಚಿವ ಸಂತೋಷ ಕಾಮಗೌಡ, ಕಿರುತೆರೆ ನಟರಾದ ಅನಂತ ದೇಶಪಾಂಡೆ, ಅಧ್ಯಯನ ಪೀಠದ ಸಂಯೋಜಕ ಪ್ರೊ.ಬಿ.ಎಸ್. ನಾವಿ ಇತರರಿದ್ದರು. ಡಾ.ಗಜಾನನ ನಾಯ್ಕ ನಿರೂಪಿಸಿದರು. ಡಾ.ಶಿವಲಿಂಗಯ್ಯ ಗೋಠೆ ವಂದಿಸಿದರು.