ಜ್ಞಾನ, ಸಂಸ್ಕೃತಿ, ಸಂಪ್ರದಾಯ ಸಂಪತ್ತಾಗಲಿ - ಶ್ರೀಸಿದ್ಧರಾಮಾನಂದ ಸ್ವಾಮೀಜಿ ಸಲಹೆ

Kanakaguru Petha Siddaramananda Swamiji
Published on

ದೇವದುರ್ಗ ಗ್ರಾಮೀಣ: ಹಾಲುಮತ ಕುರುಬ ಸಮುದಾಯದ ಮುಖಂಡರು ಸಂಪ್ರದಾಯ, ತಮ್ಮ ತನ ಮರೆತು ಕಿರುಬ ಆಗುತ್ತಿರುವುದು ದುರಂತ. ಶಿಕ್ಷಣ, ಜ್ಞಾನ ಪಡೆದು ಕುರುಬರಾಗಿ ಬದಲಾಗಬೇಕು. ಜ್ಞಾನ, ಸಂಸ್ಕೃತಿ, ಸಂಪ್ರದಾಯ ಕುರುಬರ ಸಂಪತ್ತಾಗಬೇಕು ಎಂದು ಶ್ರೀ ಕನಕಗುರುಪೀಠದ ಸಿದ್ಧರಾಮಾನಂದ ಸ್ವಾಮೀಜಿ ಹೇಳಿದರು.

ತಾಲೂಕಿನ ತಿಂಥಿಣಿ ಬ್ರಿಡ್ಜ್ ಶ್ರೀ ಕನಕ ಗುರುಪೀಠದಲ್ಲಿ ಹಮ್ಮಿಕೊಂಡಿದ್ದ ಹಾಲುಮತ ಸಂಸ್ಕೃತಿ ವೈಭವದ ಮೂರನೇ ದಿನದ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಂಗಳವಾರ ಮಾತನಾಡಿದರು. ಕುರುಬರು ರಾಜಕೀಯ ಮಾತನಾಡುವುದನ್ನು ಕಡಿಮೆ ಮಾಡಬೇಕು. ಸಿದ್ದರಾಮಯ್ಯ, ವಿಶ್ವನಾಥ, ಈಶ್ವರಪ್ಪರ ಬಗ್ಗೆ ಮಾತನಾಡುವುದು ಬಿಟ್ಟು ಶ್ರೀ ಭೀರಪ್ಪ, ರೇವಣ ಸಿದ್ದೇಶ್ವರ, ಕನಕದಾಸರು, ಹಾಲುಮತ, ಭಂಡಾರ, ಕಂಬಳಿ ಬಗ್ಗೆ ಮಾತನಾಡುವುದನ್ನು ಕಲಿಯಬೇಕು.

ನಂಬಿಕೆ ಯಾವ ಭಕ್ತನನ್ನು ಕೈಬಿಟ್ಟಿಲ್ಲ. ಗುರುವಿನ ನಂಬಿ ಜಾತಿ, ಗೋತ್ರ ಮರೆತು ಜಾತಿ ಕುರುಬರಾಗದೆ, ಜ್ಞಾನದ ಕುರುಬರಾಗಬೇಕು. ಮಠಗಳನ್ನು ಹಾಲುಮರದಂತೆ ಬೆಳೆಸಿ, ಅದರ ನೆರಳಿನಲ್ಲಿ ಬದುಕು ಕಟ್ಟಿಕೊಳ್ಳಬೇಕು. ಧರ್ಮ ಕಟ್ಟುವ ಕಾಯಕ ಎಲ್ಲರೂ ಮಾಡಬೇಕು. ಶ್ರೀಮಠ ವ್ಯಕ್ತಿ ಮೆರೆಸುವ ಕ್ಷೇತ್ರವಲ್ಲ, ಧರ್ಮ, ಸಂಸ್ಕೃತಿ, ಸಂಪ್ರದಾಯ ಮೆರೆಸುವ ಮಠವಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net