

ಮುಧೋಳ : ನಿಸರ್ಗವೇ ಒಂದು ಕಾವ್ಯ, ಅದರೊಂದಿಗೆ ನಾವು ಕಾವ್ಯಾತ್ಮಕವಾಗಿ ಬದುಕುವುದೇ ಸಂಸ್ಕೃತಿ. ನಿಸರ್ಗಕ್ಕೆ ವಿಮುಖವಾಗಿ ಬದುಕಿದರೆ ಅದು ವಿಕೃತಿ ಎಂದು ಸಾಹಿತಿ ಡಾ.ಪ್ರಕಾಶ ಖಾಡೆ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ಸ್ಥಳೀಯ ಘಟಕ ಮತ್ತು ಸಿದ್ಧೇಶ್ವರ ಸಾಹಿತ್ಯ ವೇದಿಕೆಯಿಂದ ಮಂಗಳವಾರ ಹಮ್ಮಿಕೊಂಡ ನಿಸರ್ಗ ಕವಿಗೋಷ್ಠಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಮ್ಮ ಬದುಕಿನ ಸಕಲತೆಯಲ್ಲೂ ನಿಸರ್ಗವಿದೆ. ನಿಸರ್ಗದ ಚೆಲುವನ್ನು ಕವಿಗಳು ಹಲವಾರು ಬಗೆಯಲ್ಲಿ ಬಣ್ಣಿಸಿದ್ದಾರೆ. ಅದರ ಸೊಗಸನ್ನು ಅರುವಿದ್ದಾರೆ. ಆದರೆ ಅದನ್ನು ಇರುವಂತೆ ಉಳಿಸಿಕೊಳ್ಳುವ ಮನಸ್ಸು ಇಂದು ಗಟ್ಟಿಯಾಗಬೇಕಿದೆ ಎಂದರು.
ಕವನ ವಾಚನ ಮಾಡಿದ ಪ್ರತಿಯೊಬ್ಬರ ಕವಿತೆಯನ್ನೂ ವಿಮರ್ಶಿಸಿ ಮಾತನಾಡಿದ ಅವರು, ಇಂದು ಮಂಡನೆಯಾದ ಮೂವತ್ತೇಳು ಕವಿತೆಗಳು ನಿಸರ್ಗದ ಚೆಲುವು ಜೇನು ತೊಟ್ಟಿಕ್ಕಿದ ಹಾಗೆ ಕಂಡರಿಸಿದೆ, ನಿಸರ್ಗದ ತಾಜಾತನ ಕವಿತೆಗಳ ಮೂಲಕ ಮರುಹುಟ್ಟು ಪಡೆದಿದೆ ಎಂದರು.
ಇದನ್ನೂ ಓದಿ: ಮೊಬೈಲ್ ಬಳಕೆಯಿಂದ ಮನಸ್ಸು ಹಾಳು
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಾಹಿತಿ ಡಾ. ಶಿವಾನಂದ ಕುಬಸದ ಪ್ರಕೃತಿಯೊಂದಿಗೆ ಕವಿ ಮನಸ್ಸಿನವರು ಸುಲಭವಾಗಿ ಬದುಕಬಹುದು. ಆದರೆ ಕಠೋರ ಮನಸ್ಸನ್ನೂ ಮೃದುಗೊಳಿಸುವ ಶಕ್ತಿ ನಿಸರ್ಗಕ್ಕಿದೆ ಎಂದರು.
ಮೋಡಿ ಲಿಪಿ ತಜ್ಞ, ಸಾಹಿತಿ ಡಾ.ಸಂಗಮೇಶ ಕಲ್ಯಾಣಿ, ಹೊಸ ಕವಿಗಳು ಮೊದಲು ಪುಸ್ತಕವನ್ನು, ಪ್ರಕೃತಿಯನ್ನು ಓದಿಕೊಳ್ಳಬೇಕೆಂದರು. ಹಿರಿಯ ಸಾಹಿತಿ ಎಸ್.ಎಸ್.ಉಕ್ಕಲಿ, ಸಿದ್ಧೇಶ್ವರ ಸಾಹಿತ್ಯ ವೇದಿಕೆ ಅಧ್ಯಕ್ಷೆ ಸವಿತಾ ಅಂಗಡಿ ಉಪಸ್ಥಿತರಿದ್ದರು.
ಕವಿಗೋಷ್ಠಿಯಲ್ಲಿ ಸವಿತಾ ನಾವಲಗಿ, ಉಮಾ ಕಾತರಕಿ, ಶ್ರೀಶೈಲ ಗೋಲಶೆಟ್ಟಿ, ಭೀಮಶಿ ರಾಠೋಡ, ಕಲ್ಪನಾ ಪಾಟೀಲ, ಎಚ್.ಆರ್.ಮಂಜುಳಮ್ಮ, ಶಿವಪ್ರಕಾಶ ಸರಗಣಾಚಾರಿ, ಕೆ.ಬಿ.ಮೊರಬ, ಬಸಮ್ಮ ಭಜಂತ್ರಿ, ಮಹಾದೇವಿ ಪೆಟ್ಲೂರ, ರಾಜಶೇಖರ ಉಕ್ಕಲಿ, ಸಿದ್ದಣ್ಣ ಸತ್ತಿಗೇರಿ, ಅಶ್ವಿನಿ ಕಡಪಟ್ಟಿ, ವಿಠ್ಠಲ ಕುಲಕರ್ಣಿ, ವಿಜಯಶ್ರೀ ಹೊಸಮನಿ, ರಶ್ಮಿ ಗಿರಡ್ಡಿ, ಮನು ಬಿಸ್ತಿ, ಮಂಜುಳಾ ಕಲ್ಯಾಣಿ ಮೊದಲಾವರು ನಿಸರ್ಗ ಕುರಿತ ಕವಿತೆಗಳನ್ನು ವಾಚಿಸಿದರು.