

ಮೈಸೂರು: ಸಂಸ್ಕೃತಿಯಿಂದ ಮನುಷ್ಯನ ಜೀವನದಲ್ಲಿ ಸಂಸ್ಕಾರ ಮೂಡಿ ಆತನ ಬದುಕು ಯಾವಾಗಲೂ ಸಮಾಜಮುಖಿಯಾಗಿರುತ್ತದೆ ಎಂದು ಲೇಖಕಿ ಕೆ.ಲೀಲಾ ಪ್ರಕಾಶ್ ಅಭಿಪ್ರಾಯಪಟ್ಟರು.
ಮೈಸೂರು ಉದಯಗಿರಿ ಕನ್ನಡ ಸಂಘ, ಉದಯಗಿರಿ ಶ್ರೀಜಗನ್ನಾಥ್ ವಿಠಲ ಭಜನಾ ಮಂಡಳಿ ಸಹಯೋಗದಲ್ಲಿ ಉದಯಗಿರಿಯ ಶ್ರೀರಾಮಧಾಮ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಕಸಾಪ ಜಿಲ್ಲಾಧ್ಯಕ್ಷ ಮಡ್ಡಿಕೆರೆ ಗೋಪಾಲ್ ಅವರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬದುಕಿನಲ್ಲಿ ಸಂಸ್ಕಾರ ರೂಢಿಸಿಕೊಳ್ಳಲು ಸಂಸ್ಕೃತಿಯಿಂದ ಮಾತ್ರ ಸಾಧ್ಯ. ಸಾಹಿತ್ಯ, ಸಂಸ್ಕೃತಿ ಪ್ರೀತಿಯಿಂದ ಸಮಾಜಕ್ಕೆ ಸಜ್ಜನರನ್ನು ಕೊಡುಗೆಯಾಗಿ ನೀಡಬಹುದು. ಸಂಸ್ಕಾರವಂತನ ಬದುಕು ಯಾವಾಗಲೂ ಸಮಾಜಮುಖಿಯಾಗಿರುತ್ತದೆ ಎಂದರು.
ಈ ವೇಳೆ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಕಸಾಪ ಜಿಲ್ಲಾಧ್ಯಕ್ಷ ಮಡ್ಡಿಕೆರೆ ಗೋಪಾಲ್ ಹಾಗೂ ಪತ್ನಿ ಡಾ.ಅನಸೂಯ ಅವರನ್ನು ಉದಯಗಿರಿ ಕನ್ನಡ ಸಂಘದಿಂದ ಸನ್ಮಾನಿಸಲಾಯಿತು. ಹಿರಿಯ ಪತ್ರಿಕಾ ಛಾಯಗ್ರಾಹಕ ಪ್ರಗತಿ ಗೋಪಾಲಕೃಷ್ಣ, ಕ್ಯಾತಮಾರನಹಳ್ಳಿ ಯಜಮಾನದರಾದ ಎಂ.ಶಿವಕುಮಾರ್, ಸಮಾಜ ಸೇವಕ ನಾರಾಯಣ್ ಲೋಲಪ್ಪ, ಉದಯಗಿರಿ ಕನ್ನಡ ಸಂಘದ ಉಪಾಧ್ಯಕ್ಷರಾದ ವಿದ್ಯಾಸಾಗರ್ ಕದಂಬ, ಜಯಕುಮಾರ್, ಸಹ ಕಾರ್ಯದರ್ಶಿ ರಾಜುಕೊಳ್ಳೇಗಾಲ, ಸಂಘಟಕರಾದ ರಂಗನಾಥ್ ಮೈಸೂರು, ಜಿ.ಲೋಕೇಶ್‌ರಾವ್, ಮೈ.ಗ.ಜಗದೀಶ್, ಲತಾ ಮೋಹನ್ ಇತರರು ಇದ್ದರು.