ಶಿಕ್ಷಣದೊಂದಿಗೆ ಸಂಸ್ಕಾರವೂ ಮುಖ್ಯ

11 vikram 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಅಕ್ಷರ ಜ್ಞಾನದೊಂದಿಗೆ ಸಾಮಾಜಿಕ ಜ್ಞಾನ ನೀಡುವ ಗುರುಕುಲ ಪದ್ಧತಿಗೆ ಆದ್ಯತೆ ಅವಶ್ಯಕ. ಬರೀ ಅಕ್ಷರ ಜ್ಞಾನ ಸಾಲದು. ಅದರ ಜತೆಗೆ ಸಂಸ್ಕಾರ, ಆದರ್ಶ ಮೌಲ್ಯವುಳ್ಳ ಶಿಕ್ಷಣ ಬೇಕಿದೆ. ಈ ಕೊರತೆ ನೀಗಿಸಲು ಶ್ರೀಗಳ ಮಾರ್ಗದರ್ಶನದ ಈ ಶಾಲೆ ಉನ್ನತಿ ಸಾಧಿಸಲಿ ಎಂದು ಹಾವೇರಿಯ ಡಯಟ್ ಪ್ರಾಚಾರ್ಯ ಗಿರೀಶ ಪದಕಿ ಹೇಳಿದರು.
ನಗರದ ಕೆಲಗೇರಿಯ ಸೋಮವಾರ ಏರ್ಪಡಿಸಿದ್ದ ಉಪ್ಪಿನಬೆಟಗೇರಿ ಶ್ರೀ ಕುಮಾರೇಶ್ವರ ಶಿಕ್ಷಣ ಸಂಸ್ಥೆಯ ಶ್ರೀ ಗುರು ವಿರೂಪಾಕ್ಷೇಶ್ವರ ಗುರುಕುಲ ಆಂಗ್ಲ ಮಾಧ್ಯಮ ಶಾಲೆಯ ಆರಂಭ ಸಮಾರಂಭದಲ್ಲಿ ಅವರು ಮಾತನಾಡಿದರು.
೨ ದಶಕಗಳಿಂದ ಉಪ್ಪಿನಬೆಟಗೇರಿ ಗ್ರಾಮದಲ್ಲಿ ಶ್ರೀಮಠದಿಂದ ಅಕ್ಷರ ಕ್ರಾಂತಿ ಮಾಡುತ್ತಿದ್ದು, ಗ್ರಾಮೀಣ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ನೀಡುವ ಕಾರ್ಯ ನಡೆದಿದೆ. ಈ ಕಾರ್ಯ ವಿಸ್ತಾರಗೊಳ್ಳುತ್ತಿರುವುದು ಸಂತಸ ತಂದಿದೆ. ಈ ಭಾಗದ ಮಕ್ಕಳಿಗೆ ಶ್ರೀಮಠದ ಆಶ್ರಯದಲ್ಲಿ ಸಂಸ್ಕಾರವುಳ್ಳ ಶಿಕ್ಷಣ ಸಿಗಲಿ ಎಂದರು.
ಸಾನ್ನಿಧ್ಯ ವಹಿಸಿದ್ದ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಈಗಿನ ಕಾಲದಲ್ಲಿ ಶಿಕ್ಷಣವೇ ಸಂಪತ್ತು. ಬಡ ಮಕ್ಕಳಿಗೆ ಶಿಕ್ಷಣ ಮುಖ್ಯ. ಈ ನಿಟ್ಟಿನಲ್ಲಿ ಕೆಲಗೇರಿಯಲ್ಲಿ ಆಂಗ್ಲ ಮಾಧ್ಯಮ ಶಾಲೆ ತೆರೆದಿದ್ದಲ್ಲದೇ ಗುರುಕುಲ ಮಾದರಿ ಶಾಲೆ ಆರಂಭಿಸಿದ್ದು ಸಂತಸ ತಂದಿದೆ. ಈ ಶಾಲೆ ಹೆಮ್ಮರವಾಗಿ ಬೆಳೆದು ಉತ್ತಮ ಶಿಕ್ಷಣ ನೀಡಲಿ ಎಂದು ಹಾರೈಸಿದರು.
ಉಪ್ಪಿನಬೆಟಗೇರಿ ಮೂರು ಸಾವಿರ ವಿರಕ್ತಮಠದ ಶ್ರೀ ಕುಮಾರ ವಿರೂಪಾಕ್ಷ ಸ್ವಾಮೀಜಿ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಮಠಗಳ ಕೊಡುಗೆ ಅಪಾರ. ಆಧ್ಯಾತ್ಮದ ಜತೆಗೆ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡುವಲ್ಲಿ ಮಠಗಳ ಶ್ರಮ ಸಾಕಷ್ಟಿದೆ. ಗುರುಕುಲ ಮಾದರಿಯಲ್ಲಿ ಶಾಲೆ ಆರಂಭಿಸಿ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡುವ ಉದ್ದೇಶವಿದೆ ಎಂದರು.
ಪಾಲಿಕೆ ಸದಸ್ಯೆ ಚಂದ್ರಕಲಾ ಕೊಟಬಾಗಿ, ಜಿಪಂ ಮಾಜಿ ಸದಸ್ಯ ಕಲ್ಲಪ್ಪ ಪುಡಕಲಕಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಸಿಂದಗಿ ಮಾತನಾಡಿದರು.
ಚನ್ನಬಸಪ್ಪ ಪರಾಂಡೆ, ಸಂಗನಗೌಡ ಪಾಟೀಲ, ರವಿ ಯಲಿಗಾರ, ಕಲ್ಲಯ್ಯ ಹೊಂಗಲಮಠ, ಪಂಚಯ್ಯ ಹೊಂಗಲಮಠ, ಗುರುಪಾದಯ್ಯ ಹೊಂಗಲಮಠ, ಚನ್ನಬಸಪ್ಪ ಮಸೂತಿ, ಕಲ್ಲಪ್ಪ ಹಟ್ಟಿ, ರಾಮಲಿಂಗಪ್ಪ ನವಲಗುಂದ, ಆಡಳಿತಾಧಿಕಾರಿ ರಮೇಶ ಮಡಿವಾಳರ, ಎ.ಡಿ.ಅಗ್ನಿಹೋತ್ರಿ, ಕೆ.ಸಿ.ಮಸೂತಿ, ತನುಶ್ರೀ ಹೊಂಗಲಮಠ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net