

ನರಗುಂದ: ಲಯನ್ಸ್ ಶಿಕ್ಷಣ ಸಂಸ್ಥೆ ಜಿಲ್ಲೆಯಲ್ಲಿಯೇ ಪ್ರತಿಷ್ಠಿತ ಸಂಸ್ಥೆಯಾಗಿ ಹೊರಹೊಮ್ಮಿದೆ. ಶಾಲೆ ಶಿಕ್ಷಕರು, ವಿದ್ಯಾರ್ಥಿಗಳ ಉತ್ತಮ ಸಂಸ್ಕೃತಿ, ಸಂಸ್ಕಾರ, ಸನ್ನಡತೆಯೇ ನಮ್ಮ ಸಂಸ್ಥೆಗೆ ಭದ್ರ ಬುನಾದಿಯಾಗಿದೆ ಎಂದು ಲಯನ್ಸ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಜಿ.ಟಿ. ಗುಡಿಸಾಗರ ಹೇಳಿದರು.
ಪಟ್ಟಣದ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 1991-92 ರ ಎಸ್ಸೆಸ್ಸೆಲ್ಸಿ ಬ್ಯಾಚ್ನ ಹಳೆಯ ವಿದ್ಯಾರ್ಥಿಗಳು 33 ವರ್ಷಗಳ ಬಳಿಕ ಆಯೋಜಿಸಿದ್ದ ಗುರುವಂದನೆ ಹಾಗೂ ಸಂಸ್ಥೆ ನಿರ್ದೇಶಕ ಮಂಡಳಿ ಸದಸ್ಯರಿಗೆ ಇತ್ತೀಚೆಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ದಾನಿಗಳ ನೆರವಿನಿಂದ 1981ರಲ್ಲಿ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳಿಂದ ಪಟ್ಟಣದ ಶ್ರೀ ನಗರೇಶ್ವರ ದೇವಸ್ಥಾನದಲ್ಲಿ ಲಯನ್ಸ್ ಶಿಕ್ಷಣ ಸಂಸ್ಥೆ ತರಗತಿಗಳನ್ನು ಪ್ರಾರಂಭಿಸಲಾಯಿತು. 2000ರಲ್ಲಿ ಕನ್ನಡ ಮಾಧ್ಯಮ ಪ್ರೌಢಶಾಲೆ, 2001 ರಲ್ಲಿ ಲಯನ್ಸ್ ಪದವಿಪೂರ್ವ ಕಾಲೇಜ್ ಪ್ರಾರಂಭಿಸಲಾಗಿದೆ. ಗುಣಾತ್ಮಕ ಶಿಕ್ಷಣ ನೀಡುವುದರ ಜತೆಗೆ ವಿವಿಧ ಕ್ರೀಡೆ, ಕಲೆ, ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸದಾ ಮುಂಚೂಣಿಯಲ್ಲಿದೆ. ಇಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ಸರ್ಕಾರಿ, ಅರೆ-ಸರ್ಕಾರಿ, ಸೈನಿಕ ಹುದ್ದೆ, ದೇಶ-ವಿದೇಶಗಳ ವಿವಿಧ ಖಾಸಗಿ ಕಂಪನಿಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಬಹುತೇಕರು ಸ್ವಂತ ವ್ಯಾಪಾರ ನಡೆಸುತ್ತಿದ್ದಾರೆ. ಮೇಘನಾ ಜೈನ್ ಎಂಬ ವಿದ್ಯಾರ್ಥಿನಿ ಜಿಲ್ಲಾಧಿಕಾರಿಯಾಗಿ ಆಯ್ಕೆಯಾಗಿದ್ದು ಎಲ್ಲರಿಗೂ ಹೆಮ್ಮೆ ತರಿಸಿದೆ ಎಂದರು.
ನಿವೃತ್ತ ಪ್ರಾಚಾರ್ಯ ಬಿ.ಎಂ. ಜಾಬಣ್ಣವರ, ನಿರ್ದೇಶಕ ಮಂಡಳಿ ಹಿರಿಯ ಸದಸ್ಯ ಜಿ.ಬಿ. ಕುಲಕರ್ಣಿ, ಸಿ.ಎಸ್. ಸಾಲೂಟಗಿಮಠ ಮಾತನಾಡಿದರು. ಗುರುಸಿದ್ದಮ್ಮ ಹಸಬಿ, ಡಾ.ಪ್ರಭು ನಂದಿ, ಮಹಾಂತೇಶ ಕೋರಿ, ರೂಪಾ ಗುಡಿಸಾಗರ, ಗೀತಾ ಪಾಟೀಲ, ಛಾಯಾ ಪಾಟೀಲ, ಪದ್ಮಾ ರೋಖಡೆ, ಪ್ರಕಾಶ ಜೈನ್, ಗುರುನಾಥ ಬಿರಾದಾರ, ಹೇಮಂತಕುಮಾರ, ಕೃಷ್ಣಾ ದೇವನಕುಂಡ, ರಾಜೇಂದ್ರ ಬಾಗ್ರೇಚಾ ಇತರರಿದ್ದರು.