

ಮಹಾಲಿಂಗಪುರ: ದೇವ ಭಾಷೆ, ತಾಯಿ ಭಾಷೆ ಎಂಬ ಹೆಗ್ಗಳಿಕೆಯ ಸಂಸ್ಕೃತ ಭಾಷೆಯಲ್ಲಿ ಎಲ್ಲ ಜ್ಞಾನವೂ ಅಡಗಿದೆ. ಅಂಥ ಭಾಷೆಯನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕು ಎಂದು ಕೆಎಲ್‌ಇ ಕಾಲೇಜಿನ ಉಪನ್ಯಾಸಕ ಶಿವಲಿಂಗ ಸಿದ್ನಾಳ ಹೇಳಿದರು.
ಸರ್ಕಾರಿ ಪ್ರೌಢಶಾಲೆ ಸಹಶಿಕ್ಷಕ ಡಾ.ವಿಕ್ರಂ ಬಸನಗೌಡರ ಮಾತನಾಡಿ, ಎಲ್ಲ ಭಾಷೆಗಳ ಮೇಲೂ ಸಂಸ್ಕೃತ ಭಾಷೆಯ ಛಾಯೆ ಇರುವುದನ್ನು ನೋಡಿದರೆ ನಮ್ಮ ಭಾಷೆ ವಿಶ್ವಮಾನ್ಯ ಭಾಷೆ ಎಂದು ಬಣ್ಣಿಸಿದರು.
ಸಂಸ್ಕೃತ ಶಿಕ್ಷಕ ಮಹಾಂತೇಶ ಅಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾರತಾಂಬೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಸಂಸ್ಕೃತ ಗ್ರಂಥಗಳಿಗೆ ನಮನ ಸಲ್ಲಿಸಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ಎಲ್ಲ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆಯಲ್ಲಿ ಕಂಗೊಳಿಸಿದ್ದು ವಿಶೇಷವಾಗಿತ್ತು. ವಿದ್ಯಾರ್ಥಿಗಳು ದೇಶಭಕ್ತಿಗೀತೆಗಳಿಗೆ ಹೆಜ್ಜೆ ಹಾಕುವ ಮೂಲಕ ರಂಜಿಸಿದರು.
ವಿಜ್ಞಾನ-ಸಂಸ್ಕೃತ ವಸ್ತು ಪ್ರದರ್ಶನ : ಸಂಸ್ಕೃತೋತ್ಸವ ನಿಮಿತ್ತ ವಿದ್ಯಾರ್ಥಿಗಳು ವಿಜ್ಞಾನ-ಸಂಸ್ಕೃತ ವಸ್ತು ಪ್ರದರ್ಶನ ಏರ್ಪಡಿಸಿದ್ದರು. ಗಣ್ಯರು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. 250ಕ್ಕೂ ಹೆಚ್ಚು ಅಗತ್ಯ ವಸ್ತುಗಳ ಪ್ರದರ್ಶನ ಏರ್ಪಡಿಸಿದ್ದರು. ಪ್ರತಿಯೊಂದು ವಸ್ತುವಿಗೆ ಸಂಸ್ಕೃತದಲ್ಲಿ ಏನೆನ್ನುತ್ತಾರೆ ಎಂಬುದನ್ನು ಬರೆದ್ದಿದ್ದರು. ವಸ್ತುಗಳ ಮೂಲಕ ಭಾಷೆಯ ಪರಿಚಯ ಮಾಡುವ ಅಪರೂಪದ ವಿಜ್ಞಾನ-ಸಂಸ್ಕೃತ ವಸ್ತುಪ್ರದರ್ಶನ ಇದಾಗಿತ್ತು. ಸಂಗಮೇಶ್ವರ ಸಂಸ್ಕೃತ ಪಾಠಶಾಲೆ ಮುಖ್ಯಶಿಕ್ಷಕ ಎಂ.ಎಸ್.ಮಗದುಮ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಸಂಸ್ಕೃತ ಶಿಕ್ಷಕ ಎಸ್.ಎಸ್.ಜಗದಾಳ, ಪ್ರೌಢಶಾಲೆ ಮುಖ್ಯಶಿಕ್ಷಕ ಎಸ್.ಎಂ.ಸುತಾರ, ಡಾ.ವಿಕ್ರಂ ಬಸನಗೌಡರ, ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಜಿ.ಎನ್.ಈರಗಾರ ಇದ್ದರು.