

ಮಡಿಕೇರಿ: ಇಂದಿನ ಸಂಸ್ಕೃತಿ, ಆಚಾರ-ವಿಚಾರ ಎಲ್ಲವು ನಶಿಸಲು ಯುವಪೀಳಿಗೆ ಕಾರಣ ಎಂದು ಹಿರಿಯ ಸಾಹಿತಿ ಕಸ್ತೂರಿ ಗೋವಿಂದಮ್ಮಯ್ಯ ವಿಷಾಧ ವ್ಯಕ್ತಪಡಿಸಿದರು.
ನಗರದ ಪತ್ರಿಕಾಭವನದಲ್ಲಿ ಆಯೋಜಿಸಿದ್ದ ಬರಹಗಾರ್ತಿ ಎನ್.ಎ.ಗೌರಮ್ಮರವರು ಬರೆದ ಸಂಪೂರ್ಣ ಮಹಾಭಾರತ ಪ್ರಶ್ನೋತ್ತರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಇಂದಿನ ಮಕ್ಕಳಿಗೆ ತಮ್ಮ ಸಂಸ್ಕೃತಿಯ ಬಗ್ಗೆ ಅರಿವಿಲ್ಲ. ನಮ್ಮ ನಮ್ಮ ಸಂಸ್ಕೃತಿಯನ್ನು ತಂದೆ-ತಾಯಂದಿರು ತಮ್ಮ ಮಕ್ಕಳಿಗೆ ತಿಳಿಸಬೇಕು. ಜತೆಗೆ ಒಳ್ಳೆಯತನವನ್ನು ಹೇಳಿಕೊಡಬೇಕು ಎಂದರು.
ಭಾಷೆ ಬೆಳೆದಂತೆ ಸಂಸ್ಕೃತಿ ಬೆಳೆಯುತ್ತದೆ. ಅದೇ ರೀತಿ ಪುಸ್ತಕಗಳಲ್ಲಿ ಭಾಷೆ ಸಂಪೂರ್ಣವಾದಲ್ಲಿ ಮಾತ್ರ ಓದುಗರ ಮನಸ್ಸಿಗೆ ನಾಟುತ್ತದೆ ಎಂದರು.
ಬರಹಗಾರ್ತಿ ಎನ್.ಎ.ಗೌರಮ್ಮ ಮಾತನಾಡಿ, ಪುಸ್ತಕವನ್ನು ಪ್ರಶ್ನೆ ಮತ್ತು ಉತ್ತರ ರೂಪದಲ್ಲಿ ಬರೆಯಲಾಗಿದೆ. ಇದು ಮಕ್ಕಳಿಗೆ ಅನುಕೂಲವಾಗಲಿದೆ. ಅಲ್ಲದೇ ಜನಸಾಮಾನ್ಯರು ಕೂಡ ಓದಿ ಅರ್ಥೈಸಿಕೊಳ್ಳಬಹುದು ಎಂದರು.
ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಅನಂತಶಯನ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ, ಇಂದು ಸಂಸ್ಕೃತಿ ಹಿನ್ನೆಲೆ ತಿಳಿದುಕೊಳ್ಳದೇ ತಪ್ಪುಗಳು ನಡೆಯುತ್ತಿದೆ. ಇದರಿಂದ ಸಂಸ್ಕೃತಿಯ ಶ್ರೀಮಂತಿಕೆ ಹಾಳಾಗುತ್ತಿದೆ. ಇದು ಹೆಚ್ಚಾಗಿ ಯುವ ಪೀಳಿಗೆಯಿಂದ ಎಂಬುದು ಬೇಸರದ ಸಂಗತಿ. ಸಂಸ್ಕೃತಿಯ ಅರಿವು ಪ್ರತಿಯೊಬ್ಬರಲ್ಲಿಯೂ ಇರಬೇಕು ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಗೌರವ ಕೋಶಾಧಿಕಾರಿ ಸಂಪತ್ ಕುಮಾರ್, ಗೌರವ ಕಾರ್ಯದರ್ಶಿ ಮುನೀರ್ ಅಹಮ್ಮದ್, ಪ್ರಮುಖರಾದ ಮಾದಮ್ಮಯ್ಯ ಉಪಸ್ಥಿತರಿದ್ದರು.