

ಕಡೂರು: ಪ್ರಪಂಚದಲ್ಲಿ ಆಚಾರ-ವಿಚಾರಗಳ ಜೀವನ ಶೈಲಿಗಳ ಪ್ರಭಾವದಿಂದ ಜಾನಪದ ಸಂಸ್ಕೃತಿ ಉಗಮವಾಗಿದೆ ಎಂದು ಜಾನಪದ ಸಾಹಿತಿ ಬಿ.ರಾಜಪ್ಪ ಹೇಳಿದರು.
ಮುದಿಗೆರೆಯಲ್ಲಿ ಜಾನಪದ ಪರಿಷತ್ ಜಿಲ್ಲಾ ಮತ್ತು ತಾಲೂಕು ಘಟಕದಿಂದ ಏರ್ಪಡಿಸಿದ್ದ ವಿಶ್ವ ಜಾನಪದ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿಲಿಯಂ ಜಾನ್‌ಟಾಮ್ಸ್ ಎಂಬ ಬ್ರಿಟಿಷ್ ಪ್ರಾಚೀನ ಅನ್ವೇಷಕ 1846 ಆಗಸ್ಟ್ 22 ರಂದು ಒಂದು ಪತ್ರ ಬರೆದು ಅದರಲ್ಲಿ ಜನರ ಪರಂಪರೆಯ ಸಂಗತಿಗಳ ಅಧ್ಯಾಯನಕ್ಕೆ ಫೋಕ್ಲೋರ್ ಎಂದು ಕರೆಯಬಹುದೆಂದು ಸೂಚಿಸಿದ. ಫೋಕ್ ಅಂದರೆ ಜನ ಲೋರ್ ಎಂದರೆ ಅಲ್ಲಿನ ಜನರ ಜ್ಞಾನ ಅಥವಾ ತಿಳವಳಿಕೆ ಎಂದು ವಿವರಿಸಲ್ಪಡುತ್ತದೆ. ಆಗ ಮೊದಲ ಬಾರಿಗೆ ಫೋಕ್ಲೋರ್ ಎನ್ನುವ ಪದವು ಬಳಕೆಗೆ ಬರುತ್ತದೆ. ಈ ಚಾರಿತ್ರಿಕ ದಿನದ ನೆನಪಿಗಾಗಿ ಈ ದಿನವನ್ನು ವಿಶ್ವ ಜಾನಪದ ದಿನವಾಗಿ ಆಚರಿಸಲಾಗುತ್ತಿದೆ ಎಂದರು. ಈ ಎಲ್ಲ ಸಂಸ್ಕೃತಿ ನಾಗರಿಕತೆಗಳ ಅಡಿಪಾಯವೇ ಜಾನಪದ ಎಂದರು.
ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಮಾತನಾಡಿ, ಜನಪದ ಸಂಸ್ಕೃತಿ, ಸಾಹಿತ್ಯ, ಸಂಗೀತ ಕಲೆ ಎಂದಿಗೂ ಅಜರಾಮರ.ಆದರೆ ಪಾಶ್ಚಾತ್ಯ ಸಂಸ್ಕೃತಿ ದಾಳಿಯಿಂದ ಈ ಕಲೆ ಮುಂದುವರಿಕೆ ಕುಂಠಿತವಾಗಿದೆ. ವಿಶ್ವ ಜಾನಪದ ಆಚರಣೆಯನ್ನು ಮುಂದುವರಿಸುತ್ತಾ ಜನರಲ್ಲಿ ಜಾಗೃತಿ ಮೂಡಿಸಲು ನಾವೆಲ್ಲರೂ ಕಂಕಣ ಬದ್ಧರಾಗಬೇಕಾಗಿದೆ ಎಂದು ತಿಳಿಸಿದರು.
ಡಾ.ಮಾಳೇನಹಳ್ಳಿ ಬಸಪ್ಪ ಮಾತನಾಡಿ, ಪ್ರತಿ ಮನೆಯ ಹಿರಿಯರಾದ ನಾವುಗಳು ಜಾನಪದ ಸಂಸ್ಕೃತಿಯಲ್ಲಿನ ಮೌಲ್ಯಾಧಾರಿತ ಅಂಶಗಳಾದ ಸತ್ಯ, ನಿಷ್ಠೆಧರ್ಮ, ತಾಳ್ಮೆ ಸಹಕಾರ, ಪ್ರಾಮಾಣಿಕತೆ, ಹೊಂದಾಣಿಕೆ ಮನೋಭಾವನೆ, ಶ್ರಮವಹಿಸಿ ದುಡಿಯುವ ಅಂಶಗಳನ್ನು ಹೇಳಿಕೊಡಬೇಕಿದೆ ಎಂದು ತಿಳಿಸಿದರು.
ಕಡೂರು ತಾಲೂಕು ಅಧ್ಯಕ್ಷ ಜಗದೀಶ್ವರ ಆಚಾರ್, ಸಾಹಿತಿ ಲೋಹಿತ್ ಜಾನಪದ ಕಲಾವಿದರಾದ ಹನುಮಂತಪ್ಪ ಮತ್ತು ಮಂಜಪ್ಪ, ಶಾಂತಮ್ಮ, ತಿಪ್ಪೇಶ, ಹಿರೇನಲ್ಲೂರು ಹೋಬಳಿ ಅಧ್ಯಕ್ಷ ಜಯಣ್ಣ, ಪರಮೇಶಪ್ಪ, ಮಲಿಯಪ್ಪ, ಚಿಕ್ಕನಲ್ಲೂರು ಪರಮೇಶ್, ತಿಪ್ಪೇಶ್, ಮತ್ತಿತರಿದ್ದರು.